ಚಿತ್ರದುರ್ಗ: ಪೇಮೆಂಟ್ ಸೀಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಮುಖ್ಯ ಬೇಡಿಕೆಗಳನ್ನು ಪರಿಗಣಿಸಿ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸೇರಿಸಿ, ಅನುದಾನ ಮೀಸಲಿಟ್ಟು, ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.
ಪೇಮೆಂಟ್ ಸೀಟ್‌ನ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಕಲ್ಪಿಸಬೇಕು. 2013 ರಿಂದ 2018ರ ವರೆಗೆ ಜಾರಿಯಲ್ಲಿದ್ದ ರೀತಿಯಲ್ಲೇ ಎಸ್ಸಿ-ಎಸ್ಟಿ ಸಮುದಾಯದವರಿಗೆ ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ತರಬೇತಿ ಆರಂಭಿಸಬೇಕು. ಆದಾಯ ಮಿತಿ 2.5 ಲಕ್ಷ ರೂ.ನಿಂದ 10ಲಕ್ಷ ರೂ.ಗೆ ಹೆಚ್ಚಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ 2.5 ಸಾವಿರ ರೂ.ಗೆ ಏರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅವರ ಹಿತ ಕಾಯುವುದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ. ಕೂಡಲೇ ಈ ಕುರಿತು ಸಮಾಜ ಕಲ್ಯಾಣ ಸಚಿವರ ಜೊತೆಯಲ್ಲಿ ಚರ್ಚಿಸಿ, ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮಾಜಿ ಸಚಿವ ಎಚ್.ಆಂಜನೇಯ, ಸಿಎಂಗೆ ಮನವರಿಕೆ ಮಾಡಿದರು.
ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಭೀಮಾ ಯಾತ್ರೆ ಬಳಗದ ಅಧ್ಯಕ್ಷ ರವಿಕುಮಾರ್, ಉಪನ್ಯಾಸಕ ಈ.ಪ್ರಕಾಶ್, ಶಾಂತಕುಮಾರ್, ತಿಪಟೂರು ಮಂಜು, ಸಚಿನ್ ಗೌತಮ್ ಇತರರಿದ್ದರು.