ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸಿದರು. ತಹಸೀಲ್ದಾರ್ ಎಸ್.ಸಂತೋಷ್, ಬಿಇಒ ಟಿ.ಎನ್.ಗಾಯತ್ರಿ, ಹಂಪಾಪುರ ಕುಮಾರ್ ಇದ್ದರು.  
ಜಿಲ್ಲೆ

ಎಸ್ಸಿ, ಎಸ್ಟಿ ಮೀಸಲಾತಿ ಕಸಿದುಕೊಳ್ಳುವ ಯತ್ನ

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಸಾ.ರಾ.ಮಹೇಶ್ ಆರೋಪ

ಕೆ.ಆರ್.ನಗರ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ಕೆಲ ಸಮುದಾಯಗಳು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ಎಚ್ಚೆತ್ತಿಕೊಳ್ಳಬೇಕು ಎಂದು ಶಾಸಕ ಸಾ.ರಾ.ಮಹೇಶ್ ಸಲಹೆ ನೀಡಿದರು.


ಪಟ್ಟಣದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ, ಪುರಸಭೆ, ಸಮಾಜಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇರೆ ಸಮುದಾಯದವರಿಗೂ ಮೀಸಲಾತಿ ಕೊಡಲಿ, ಆದರೆ ಪರಿಶಿಷ್ಟ ಸಮುದಾಯಗಳ ಮೀಸಲಾತಿ ಕಿತ್ತುಕೊಳ್ಳಬಾರದು. ನಮ್ಮ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು, ಈಗಿನ ಸರ್ಕಾರ ನಿಧಾನವಾಗಿ ಅದನ್ನು ಒಪ್ಪಿಕೊಂಡಿದೆ. ಆದರೇ ಅದರ ಕಣ್ತೆರೆಸಿದ್ದು ಸ್ವಾಮೀಜಿಗಳು ಎಂದು ತಿಳಿಸಿದರು.


ವಾಲ್ಮೀಕಿ ಮಹರ್ಷಿಗಳು ಮಾನವನ ಮನಪರಿವರ್ತನೆಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರು ರಚಿಸಿದ ರಾಮಾಯಣ ಎಲ್ಲರಿಗೂ ಮಾದರಿಯಾಗಿದೆ. ಮಹನೀಯರ ಆದರ್ಶಗಳನ್ನು ಎಲ್ಲರು ತಮ್ಮಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸುದಾರಣೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ವಾಲ್ಮೀಕಿ, ಅಂಬೇಡ್ಕರ್, ಬಾಬು ಜಗಜೀವನರಾಮ್, ಬಸವಣ್ಣ, ಕನಕದಾಸರಂತಹ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ತಹಸೀಲ್ದಾರ್ ಎಸ್.ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್‌ಕುಮಾರ್, ಬಿಇಒ ಟಿ.ಎನ್.ಗಾಯತ್ರಿ, ತಾಲೂಕು ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ರಾಜ್ಯ ನಿರ್ದೇಶಕ ಕೆ.ವಿ.ರಮೇಶ್, ಮುಖಂಡರಾದ ಸುಬ್ಬುಕೃಷ್ಣ, ದೇವರಾಜ್, ಕೃಷ್ಣನಾಯಕ, ಲಾರಿಪ್ರಕಾಶ್ ಹಾಜರಿದ್ದರು.

ಭಾವಚಿತ್ರ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ತಾಲೂಕಿನ ನಾಟನಹಳ್ಳಿ ಗ್ರಾಮದ ವಾಲ್ಮೀಕಿ ನಾಯಕರ ಸಂಘದ ಪದಾಧಿಕಾರಿಗಳು ಅಲಂಕೃತ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ನಾಟನಹಳ್ಳಿ ಗ್ರಾಮದಿಂದ ಕೆ.ಆರ್.ನಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಬಳಿಕ ತಾಲೂಕು ಕಚೇರಿ ಬಳಿ ಬಂದು ಜಯಂತಿ ಆಚರಣೆ ನಂತರ ಮತ್ತೆ ಮೆರವಣಿಗೆ ಮೂಲಕ ತಮ್ಮ ಸ್ವಗ್ರಾಮಕ್ಕೆ ತೆರಳಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ನಿರ್ದೇಶಕ ಕೆ.ವಿ.ರಮೇಶ್, ಮುಖಂಡರಾದ ಸುಬ್ಬುಕೃಷ, ದೇವರಾಜ್, ಕೃಷ್ಣನಾಯಕ ಇನ್ನಿತರರು ಇದ್ದರು.