ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್‌ಪಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಮತ್ತಿತರರಿದ್ದಾರೆ. 
ಜಿಲ್ಲೆ

ಎಸ್ಸಿ, ಎಸ್ಟಿ ಪ್ರಕರಣಗಳ ಇತ್ಯರ್ಥ ತ್ವರಿತವಾಗಲಿ

ವಿಜಯಪುರ: ತಾಲೂಕು ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಎಸ್ಸಿ, ಎಸ್ಟಿ ಸಭೆ ನಡೆಸಿ ಕುಂದುಕೊರತೆ ಆಲಿಸುವುದರ ಜತೆಗೆ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಹಸೀಲ್ದಾರ್‌ಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವನಬಾಗೇವಾಡಿ ತಾಲೂಕಿನಲ್ಲಿ ದಾಖಲಾದ ಅಕ್ರಮ-ಸಕ್ರಮ 14 ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯ 4 ಪ್ರಕರಣಗಳನ್ನು ಸ್ಥಳ ಪರಿಶೀಲನೆ ಮಾಡಿ ಇತ್ಯರ್ಥಪಡಿಸಲು ಕಾನೂನು ಪ್ರಕಾರ ಕ್ರಮ ವಹಿಸುವಂತೆ ಬಸವನಬಾಗೇವಾಡಿ ತಹಸೀಲ್ದಾರ್‌ಗೆ ಸೂಚಿಸಿದರು.

ವೈಯಕ್ತಿಕ ಸೌಲಭ್ಯಕ್ಕಾಗಿ ಬಳಸಬೇಕಾದ ಅನುದಾನ ಮೂಲ ಸೌಕರ್ಯಗಳಿಗೆ ಬಳಕೆಯಾಗಿರುವ ಕುರಿತು ಸಮಿತಿ ಸದಸ್ಯ ರಾಜು ಕೂಚಬಾಳ ಸಭೆಯ ಗಮನಕ್ಕೆ ತಂದಾಗ, ಇಂಡಿ ಉಪವಿಭಾಗಾಧಿಕಾರಿಗಳು ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಎರಡು ವಾರದೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.

ತೊರವಿಯಲ್ಲಿ ಸ್ಮಶಾನ ಭೂಮಿ ಜಾಗ ಅಳತೆ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ಹೊಲಿಗೆ ಯಂತ್ರದ ಟೆಂಡರ್‌ನ್ನು 3 ದಿನಗಳೊಳಗಾಗಿ ತೆರೆದು ಸದಸ್ಯರಿಗೆ ಈ ಕುರಿತು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಬಸವನಬಾಗೇವಾಡಿ ತಾಲೂಕಿನ ನಾಗೂರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಇಂಡಿ, ಡಿವೈಎಸ್‌ಪಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ನಾಗೂರಗೆ ಭೇಟಿ ನೀಡಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪರಿಶಿಷ್ಟ ಜಾತಿ, ವರ್ಗದ ಅಧಿನಿಯಮ 1989ರನ್ವಯ 2023 ಜ.1 ರಿಂದ ಜೂ.30ರವರೆಗೆ ಒಟ್ಟು 39 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1 ಸುಳ್ಳು, 19 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 17 ಪ್ರಕರಣಗಳು ತನಿಖೆಯಲ್ಲಿದ್ದು, 1 ಪ್ರಕರಣವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. 1 ಪ್ರಕರಣ ಇತ್ಯರ್ಥಗೊಂಡಿದೆ ಎಂದು ಮಾಹಿತಿ ಒದಗಿಸಲಾಯಿತು.

ಎಸ್‌ಪಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಸೌದಾಗರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ್, ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ, ಸಮಿತಿ ಸದಸ್ಯರಾದ ಅರವಿಂದ ಸಾಲವಾಡಗಿ, ಅಡಿವೆಪ್ಪ ಸಾಲಗಲ್ಲ, ರಾಜಶೇಖರ ಕೂಚಬಾಳ, ವಿನಾಯಕ ಗುಣಸಾಗರ, ಮುತ್ತಣ್ಣ ಸಾಸನೂರ, ಮನೋಹರ ಕಾಂಬಳೆ, ಬಸವರಾಜ ಪೂಜಾರಿ, ಶಿವಾನಂದ ಪಟ್ಟೇದ ಮತ್ತಿತರರಿದ್ದರು.