ಜಿಲ್ಲೆ

ಎಸ್ಸಿ-ಎಸ್ಟಿ ಜನ,ಸಂಘಟನೆ ಬೀದಿಗೆ ಇಳಿಯಲಿ

ಬಾಗಲಕೋಟೆ:ರಾಜ್ಯ ಸರ್ಕಾರ 2023-24ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡು, ತುಳಿತಕ್ಕೆ ಒಳಗಾದ ಜನರಿಗೆ ಅನ್ಯಾಯ ಮಾಡಿದೆ. ಇದನ್ನು ಪ್ರತಿಭಟಿಸಿ ಎಸ್ಸಿ, ಎಸ್ಟಿ ಜನರು ಹಾಗೂ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾಗುವಂತೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕರೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಆಡಳಿತ ಗಬ್ಬು ನಾರುತ್ತಿದೆ. ಶಕ್ತಿ ಯೋಜನೆ 70.51 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಎಸ್ಸಿಪಿ, ಟಿಎಸ್ಪಿ ಹಣವನ್ನು ಶಕ್ತಿಗೆ ದುರ್ಬಳಿಕೆ ಮಾಡಿಕೊಂಡಿದ್ದಾರೆ. ಸಂವಿಧಾನಕ್ಕೆ ವಿರುದ್ದವಾಗಿ ಕಾನೂನು ಉಲ್ಲಂಘಿಸಿ ಓಟ ಬ್ಯಾಂಕ್ ರಾಜಕಾರಣ ಮಾಡಿದ್ದು, ಇದನ್ನು ಖಂಡಿಸಿ ಎಸ್ಸಿ ಎಸ್ಟಿ ಜನರು ಪ್ರತಿಭಟನೆಗೆ ಮುಂದಾಗುವಂತೆ ಅವರು ತಿಳಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅಧಿಕಾರಿಗಳು ವರ್ಗಾವಣೆಗೆ ಲಂಚ ಕೇಳುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಆದರೂ ಈ ನಿರ್ಲಜ್ಯ, ನೀತಿಗೆಟ್ಟ ಸರ್ಕಾರ ಇನ್ನೂ ಸಹ ಅಧಿಕಾರದಲ್ಲಿ ಮುಂದುವರೆದಿದೆ. ತಕ್ಷಣವೇ ಸಿದ್ದರಾಮಯ್ಯ ಸರ್ಕಾರ ರಾಜೀನಾಮೆ ಕೊಟ್ಟು ತನಿಖೆಗೆ ಆದೇಶ ನೀಡಬೇಕು. ತನಿಖೆಯಲ್ಲಿ ನಿರ್ದೋಶಿ ಎಂದಾದರೆ ಮತ್ತೆ ಅಧಿಕಾರ ಪಡೆಯಲಿ ಎಂದರು.

ಮೂಲೆ ಸೇರಿದ್ದ ಕೆಂಪಣ್ಣ ಈಗ ಏನು ಹೇಳಿದ…?
ಸಿದ್ದರಾಮಯ್ಯ, ಡಿಕೆಶಿ ಯಾರ ಮನೆಯ ಮೂಲೆಯಲ್ಲಿ ಇದ್ದನೋ ಆ ಕೆಂಪಣ್ಣ ಇದೀಗ ಹೊರಗೆ ಬಂದಿದ್ದಾನೆ. ಬಾಣಲೆಯಿಂದ ಬೆಂಕಿ ಬಿದ್ದಿದ್ದೇವೆ ಎಂದಿದ್ದಾರೆ. ಆದರೆ, ನಮ್ಮ ಸರ್ಕಾರದ ಮೇಲೆ ಯಾವುದೇ ಆಧಾರ ಇಲ್ಲದೇ ಸುಳ್ಳು ಆರೋಪ ಮಾಡಿದ್ದ ಆ ಸ್ಕ್ರ್ಯಾಪ್ 80 ವರ್ಷದ ಗುತ್ತಿಗೆದಾರ ಕೆಂಪಣ್ಣ ಈಗ ಪಶ್ಚಾತ್ತಾಪದ ಮಾತು ಹೇಳುತ್ತಿದ್ದಾರೆ. ಆದರೆ, ಕೆಂಪಣ್ಣ ಗುತ್ತಿಗೆದಾರ ಕೆಲಸ ಬಿಟ್ಟು 20 ವರ್ಷ ಆಗಿರಬೇಕು. ಸುಮ್ಮನೆ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದ. ಇದೀಗ ಸ್ವತಃ ಕೆಲಸ ಮಾಡಿದ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಹೀಗಾಗಿ ನೈತಿಕತೆ ಇದ್ದರೆ ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ಕೊಟ್ಟು ತೆರಳಬೇಕು. ನಮ್ಮ ಸರ್ಕಾರದ ವಿರುದ್ದ ಗುತ್ತಿಗೆ ಕೆಲಸ ಮಾಡಿದ್ದ ಯಾರೊಬ್ಬರೂ ಆರೋಪ ಮಾಡಿರಲಿಲ್ಲ. ಆದರೂ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿದವು. ಇದೀಗ ಲಂಚದ ಬಗ್ಗೆ ಸತ್ಯ ಹೇಳುತ್ತಿದ್ದಾರೆ. ಅಜ್ಜಯ್ಯನ ಮೇಲೆ ಆಣೆ ಮಾಡಲು ಸಿದ್ದರಾಗಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರು ಈ ಲೋಕಾಯುಕ್ತಕ್ಕೆ ಈ ಪ್ರಕರಣವನ್ನು ಒಪ್ಪಿಸಿ ರಾಜೀನಾಮೆ ನೀಡುವಂತೆ ಕಾರಜೋಳ ಆಗ್ರಹಿಸಿದರು.

ಸಿಡಿ ಹೋಗಿ ಭ್ರಷ್ಟಾಚಾರಕ್ಕೋ ತಡೆಯಾಜ್ಞೆ:
ಈ ಹಿಂದೆಯಲ್ಲ ಸಿಡಿ ಪ್ರಕರಣಗಳಲ್ಲಿ ಸಚಿವರು ಕೋರ್ಟ್ ನಿಂದ ತಡೆಯಾಜ್ಞೆ ತರುತ್ತಿದ್ದರು. ಆದರೆ, ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರದ ಸಚಿವರು ತಮ್ಮ ಭ್ರಷ್ಟಾಚಾರದ ವಿರುದ್ದ ಕೋರ್ಟ್ ನಿಂದ ತಡೆಯಾಜ್ಞೆ ತರುತ್ತಿದ್ದಾರೆ. ಇದು ಸರಿಯಲ್ಲ. ಆರೋಪಗಳು ಬಂದಾಗ ಅದನ್ನು ಸ್ವಾಗತಿಸಿ ತನಿಖೆಗೆ ಎದುರಿಸಬೇಕು. ಅದನ್ನು ಬಿಟ್ಟು ನಾವು ಯಾರಿಗೂ ಎದುರಲ್ಲ, ಇಂತವೆಲ್ಲ ನೋಡಿದ್ದೇವೆ ಎನ್ನುವುದು ಭಂಡತನವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವಾಗ ಭಂಡತನ ಮಾಡಬಾರದು. ನಾನು ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಇದು ಸಿದ್ದರಾಮಯ್ಯ ಸರ್ಕಾರದ ಮೇಲೆ ಬಂದಿರುವ ಆರೋಪವಾಗಿದ್ದರಿಂದ ಇಡೀ ಸರ್ಕಾರ ರಾಜೀನಾಮೆ ನೀಡಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.

2018ರಲ್ಲಿ ಕಮಿಷನ್ ಯಾರಿಗೋಗಿದೆ ಸಿದ್ದರಾಮಯ್ಯ ಅವರೇ…?
ಇನ್ನು ಜಲಸಂಪನ್ಮೂಲ ಇಲಾಖೆಯಲ್ಲಿ 25 ಸಾವಿರ ಕೋಟಿ ರೂ. ಯೋಜನೆಗಳಿಗೆ ದುಡ್ಡು ಇಲ್ಲದೇ ಚಾಲನೆ ನೀಡಿ ಹೋಗಿದ್ದಾರೆ ಎನ್ನುವ ಕಾಂಗ್ರೆಸ್ಸಿಗರ ಆರೋಪಕ್ಕೆ ತಿರುಗೇಟು ನೀಡಿರುವ ಇಲಾಖೆಯ ಮಾಜಿ ಸಚಿವ ಕಾರಜೋಳ, 2018ರಲ್ಲಿ ಮನೆಗೆ ಹೋಗುವಾಗಿ 15 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಟೆಂಡರ್ ಕರೆದು ಹೋಗಿದ್ದೀರಲ್ಲ ಆಗ ಖಜಾನೆಯಲ್ಲಿ ದುಡ್ಡು ಇಟ್ಟು ಹೋಗಿದ್ರಾ? ಮತ್ತೆ ಕಮಿಷನ್ ಯಾರಿಗೆ ಹೋಯಿತು? ಅಲ್ಲದೇ ಒಂದು ಲಕ್ಷ ಕೋಟಿ ರೂ. ಆನ್ ಗೋಯಿಂಗ್ ವರ್ಕ್ ಬಿಟ್ಟು ಹೋಗಿದ್ದು, ಅದನ್ನು ಮುಂದಿನ ಸರ್ಕಾರದ ಮೇಲೆ ಹೊರೆ ಹೇರಿ ಹೋಗಿದ್ದೀರಿರಲ್ಲ. ಸರ್ಕಾರ ನಡೆಸುವಾಗ ಪ್ರತಿ ತಿಂಗಳು ಕಾಮಗಾರಿಗಳಿಗೆ ಅಭ್ಯ ಅನುದಾನದಲ್ಲಿ ಒಂದು, ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದರು.

ಫಲಾಯನ ಮಾಡೋರು ಲೀಡರಾ…?
ರಾಹುಲ್ ಗಾಂಧಿ ಮರಳಿ ಸಂಸತ್ ಪ್ರವೇಶದ ಬಗ್ಗೆ ಲೇವಡಿ ಮಾಡಿದ ಕಾರಜೋಳ, ಅವರಿಗೆ ಶಕ್ತಿ ಇದ್ದರ ಲೋಕಸಭೆಯಲ್ಲಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಫಲಾಯನ ಮಾಡಿದರೆ ಅವರು ಹೇಗೆ ಲೀಡರ್ ಆಗುತ್ತಾರೆ ಎಂದು ಛೇಡಿಸಿದರು.

ಈ ವೇಳೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.