ಜಿಲ್ಲೆ

ಎಸ್‌ವಿಕೆ ಪದವಿ ಕಾಲೇಜಿಗೆ ಕುರ್ಚಿ ಕೊಡುಗೆ

ಕೊಳ್ಳೇಗಾಲ: ಬೆಂಗಳೂರಿನ ವಿ.ಎಸ್. ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಗುರುವಾರ ಪಟ್ಟಣದ ಎಸ್‌ವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ 150 ಕುರ್ಚಿಗಳು ಹಾಗೂ ಮೂವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಯಿತು.


ಕಾರ್ಯಕ್ರಮ ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ವಿ.ಎಸ್.ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ನಮ್ಮ ಕಾಲೇಜಿನ ಮಕ್ಕಳಿಗೆ ಅನುಕೂಲವಾಗುವಂತೆ 73 ಸಾವಿರ ರೂ. ವೆಚ್ಚದಲ್ಲಿ ಕುರ್ಚಿಗಳನ್ನು ನೀಡಿದ್ದಾರೆ. ಅಂತೆಯೇ, 2022-23ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ, ಉನ್ನತ ವ್ಯಾಸಂಗಕ್ಕೆ ಇಂಜಿನಿಯರ್ ಕಾಲೇಜಿಗೆ ದಾಖಲಾಗಿರುವ ಲಾಸ್ಯಾ ಹಾಗೂ ಸ್ಮುಶಿತಾ ಎಂಬ ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರದ ಚೆಕ್ ವಿತರಣೆ ಮಾಡಿದ್ದಾರೆ. ಹಾಗೆಯೇ, ಎಂಜಿಎಸ್‌ವಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಗುಣಶೇಖರ್‌ಗೆ 9 ಸಾವಿರದ ಚೆಕ್ ನೀಡಿ ಪ್ರೋತ್ಸಾಹಿಸಿದ್ದು, ಸಂಸ್ಥೆಯ ಕೊಡುಗೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಅಯ್ಯಂಗಾರ್ ಟ್ರಸ್ಟ್ ಪರವಾಗಿ ಎಸ್‌ವಿಕೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹರ್ಷ ಹಾಗೂ ಶೈಕ್ಷಣಿಕ ಸಲಹೆಗಾರ ನರಸಿಂಹನ್ ಸಾಂಕೇತವಾಗಿ 5 ಕುರ್ಚಿಗಳನ್ನು ಹಾಗೂ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು. ಉಪನ್ಯಾಸಕ ಜೋಸೆಫ್ ಅಲೆಕ್ಸಾಂಡರ್, ಮಹದೇವ, ಶಾಂತರಾಜು, ಉಮಾ, ಮತ್ತಿತರಿದ್ದರು.