ವಿಜಯವಾಣಿ ಸುದ್ದಿಜಾಲ ಧಾರವಾಡ
ಒಳ್ಳೆ ಕಾರ್ಯಕ್ಕೆ ಅಡೆತಡೆಗಳು ಸಹಜ. ಅವುಗಳನ್ನು ಮೀರಿ ಕಾರ್ಯ ನಿರ್ವಹಿಸುವ ಮನಸ್ಥಿತಿ ನಮ್ಮದಾಗಬೇಕು. ಭರವಸೆಯೊಂದಿಗೆ ಕೆಲಸ ಮಾಡುವುದೇ ನಮ್ಮ ಸಂಕಲ್ಪವಾಗಬೇಕು ಎಂದು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ವಿವಿ ಗೌರವ ಪ್ರಾಧ್ಯಾಪಕ ಡಾ. ಪ್ರಕಾಶ ಭಟ್ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಸದಸ್ಯರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಆತ್ಮ ನಿರ್ಭರತೆ ಜಾಗೃತವಾದರೆ ಎಲ್ಲವೂ ಸಾಧ್ಯ. ಯಾವುದೇ ಕಾರ್ಯಾರಂಭಕ್ಕೆ ಮುನ್ನ ಏನು ಮಾಡುವುದು?, ಹೇಗೆ ಮಾಡುವುದು? ಎಂಬ ಪ್ರಶ್ನೆ ಹಾಕಿಕೊಳ್ಳುವುದರಿಂದ ಎಲ್ಲದರಲ್ಲೂ ಯಶಸ್ಸು ಸಾಧ್ಯ ಎಂದರು.
ರಾಘವೇಂದ್ರ ಭಟ್ ಎಸ್‌ಡಿಎಂಸಿ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯ ಕುರಿತು ಮಾತನಾಡಿ, ಬಾಲ ಕಾರ್ಮಿಕತೆ ತಡೆಯುವುದರಿಂದ ಶಿಕ್ಷಣದಿಂದ ದೂರ ಉಳಿಯುವ ಮಕ್ಕಳನ್ನು ಶಿಕ್ಷಣದೆಡೆಗೆ ಸೆಳೆಯುವುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಸಮುದಾಯ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಕಾರ್ಯೋನ್ಮುಖವಾಗಬೇಕು. ಮಕ್ಕಳಿಗೆ ವಿಶೇಷವಾಗಿ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕು ಎಂದ ಅವರು, ಪ್ರತಿ ಶಾಲಾ ಮಟ್ಟದಲ್ಲಿ ಮಕ್ಕಳ ಸುರಕ್ಷತೆಗೆ ಇರುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು ಮಾಹಿತಿ ನೀಡಿದರು.
ಶಾಲೆ ಮತ್ತು ಪಂಚಾಯಿತಿ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಎಸ್‌ಡಿಎಂಸಿ ಕಾರ್ಯ ನಿರ್ವಹಿಸಬೇಕು. ಬರೀ ಎಸ್‌ಡಿಎಂ ಸದಸ್ಯರಾಗಿರದೆ, ಶಾಲೆಯ ಎಲ್ಲ ಮಕ್ಕಳ ಪಾಲಕ, ಪೋಷಕರ ಸ್ಥಾನ ತುಂಬುವಂತಹ ಚಿಂತನೆಗೆ ತೆರೆದುಕೊಳ್ಳಬೇಕು. ಮಕ್ಕಳನ್ನೇ ಸುಸ್ಥಿರ ಸಮಾಜದ ಅಭಿವೃದ್ಧಿಯ ಸೂಚ್ಯಂಕವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಯಂತ್ ದಿವೇಕರ, ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್. ಮಾತನಾಡಿದರು. ಜಿಲ್ಲೆಯ 50 ಶಾಲೆಗಳಿಂದ 350ಕ್ಕೂ ಹೆಚ್ಚು ಎಸ್‌ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.