ಜಿಲ್ಲೆ

ಎಸ್‌ಡಿಎಂನಲ್ಲಿ ನ.07ರಂದು ಕಂಚಿಶ್ರೀ ವಾಸ್ತವ್ಯ

 ಹಾಸನ: ಕಾಂಚೀಪುರಂನ ಕಂಚಿ ಕಾಮಕೋಟಿ ಪೀಠಾಧ್ಯಕ್ಷರಾದ ಜಗದ್ಗುರು ಪೂಜ್ಯಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಅವರು ನ.7 ರಂದು ನಗರ ಪ್ರವೇಶ ಮಾಡಲಿದ್ದು, ಮೂರು ದಿನ ತಣ್ಣೀರುಹಳ್ಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ತಮ್ಮ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ ಎಸ್‌ಡಿಎಂ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ಯು. ಶೈಲಜಾ ಹೇಳಿದರು.

ನ.7 ರಿಂದ 9 ರ ವರೆಗೆ ಎಸ್‌ಡಿಎಂ ಮಹಾವಿದ್ಯಾಲಯದ ಆವರಣದಲ್ಲಿರುವ ಹಳ್ಳದ ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಗಳ ಪೂಜಾ ಕೈಂಕರ್ಯ ನೆರವೇರಲಿದೆ. ಇದೇ ವೇಳೆ ಆಗಮಿಸಿರುವ ಭಕ್ತರಿಗೆ ಆಶೀರ್ವಾದ ಜೊತೆಗೆ ಆಶೀರ್ವಚನ ನೀಡಲಿದ್ದಾರೆ. ಇದು ಹಾಸನದ ಸೌಭಾಗ್ಯ ಎನಿಸಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಶ್ರೀಗಳೊಂದಿಗೆ ಅವರೊಂದಿಗೆ ಸುಮಾರು 65 ಮಂದಿ ಇರುವ ಅವರ ಶಿಷ್ಯಗಣವೂ ಆಗಮಿಸಲಿದೆ ಎಂದ ಅವರು, ಕಾಂಚೀಪುರಂನಲ್ಲಿ ಆಯುರ್ವೇದ ಸಂಸ್ಥೆಯೂ ಇದೆ. ಈ ಕಾರಣದಿಂದಲೇ ಶ್ರೀಗಳು ನಮ್ಮ ಸಂಸ್ಥೆಗೆ ಆಗಮಿಸಿ ಇಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿರಬಹುದು ಎಂದು ಪ್ರಶ್ನೆಗೆ ಉತ್ತರಿಸಿದರು. ಮೂರು ದಿನಗಳ ನಂತರ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸುವರು ಎಂದು ಹೇಳಿದರು.

ಇದೇ ವೇಳೆ ದೇಶದ ಸುಮಾರು 22 ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆದ ಅಸೆಸ್‌ಮೆಂಟ್‌ನಲ್ಲಿ ಹಾಸನದ ಎಸ್‌ಡಿಎಂ ನಾಲ್ಕನೇ ಸ್ಥಾನ ಪಡೆದಿದೆ. ಅಂತೆಯೇ ಉಡುಪಿ ಸಂಸ್ಥೆ 2ನೇ ಹಾಗೂ ಬೆಂಗಳೂರಿನ ಧರ್ಮಸ್ಥಳ ಆಯುರ್ವೇದ ಸಂಸ್ಥೆ 9ನೇ ಸ್ಥಾನ ಪಡೆದಿದೆ ಎಂದು ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾವಿದ್ಯಾಲಯದ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ್ ಪೂಜಾರಿ, ಡಾ.ಶಿವಕುಮಾರ್, ಡಾ.ಗುರು ಬಸವರಾಜು ಯಲಗಚ್ಚಿನ, ಬ್ರಾಹ್ಮಣ ಸಭಾದ ವೆಂಕಟೇಶ್ ಇದ್ದರು.