ಜಿಲ್ಲೆ

ಎಸ್ಟಿಗೆ ಸೇರಿಸಲು ಈಡಿಗ ಸಮಾಜ ಆಗ್ರಹ

ಚಿತ್ರದುರ್ಗ: ಈಡಿಗ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾ ಸಮಿತಿ ಕಾರ್ಯಕರ್ತರು, ಸಮಾಜದವರು ಶುಕ್ರವಾರ ಒಂದು ದಿನದ ಉಪವಾಸ ಸತ್ಯಾಗ್ರಹದೊಂದಿಗೆ ಪ್ರತಿಭಟನೆ ನಡೆಸಿದರು.

ಸಮಾಜದ ನ್ಯಾಯಯುತ 16 ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ಮೀಸಲಿಟ್ಟಿದ್ದ ಹಣ ಬಳಸಿಕೊಂಡು, ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಬಿಡುಗಡೆಗೊಳಿಸಿ ಸಮಾಜದ ಪ್ರಗತಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಕುಲ ಕಸುಬನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಮಂಜೂರು ಮಾಡಿ, ಜೀವನಕ್ಕೆ ಭದ್ರತೆ ಕಲ್ಪಿಸಬೇಕು. ರಾಜ್ಯದಲ್ಲಿರುವ ಸಮಾಜದ ನಿರ್ಗತಿಕರಿಗೆ ವಸತಿ, ನಿವೇಶನ ಸೌಕರ್ಯ ಒದಗಿಸಬೇಕು. ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗ ಬ್ರಹ್ಮಶ್ರೀ ನಾರಾಯಣ ಗುರು ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

ಎಂಎಲ್ಸಿ ಕೆ.ಎಸ್.ನವೀನ್ ಬೆಂಬಲ ಸೂಚಿಸಿ ಮಾತನಾಡಿ, ಈಡಿಗ ಸಮಾಜದ ಧ್ವನಿಯಾಗಿ ಬೇಡಿಕೆ ಈಡೇರಿಕೆಗಾಗಿ ವಿಧಾನ ಪರಿಷತ್‌ನಲ್ಲಿ ಚರ್ಚಿಸಿ, ಸರ್ಕಾರದ ಗಮನ ಸೆಳೆಯುತ್ತೇನೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವ, ಚಿತ್ರದುರ್ಗ-ಶಿವಮೊಗ್ಗ ಭಾಗದಲ್ಲಿ ಈಡಿಗ ಹೆಸರಿನಲ್ಲಿ ಸಮಾಜದವರಿದ್ದಾರೆ. ಅನೇಕರಿಗೆ ಕುಲಕಸುಬು ನಡೆಸಲು ಅವಕಾಶ ಇಲ್ಲದಾಗಿದೆ. ಹೀಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ನೆರವಿಗೆ ದಾವಿಸಿ ಈ ಸಮಾಜವನ್ನು ಮೇಲೆತ್ತುವ ಕಾರ್ಯ ಮಾಡಬೇಕಿದೆ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಡಿಕೆಗಳ ಕುರಿತು ಪ್ರಣವಾನಂದ ಶ್ರೀಗಳೊಂದಿಗೆ ಕೆಲಕಾಲ ಚರ್ಚಿಸಿದರು. ಬಸವನಾಗಿದೇವ ಶ್ರೀ, ಮಹಾಮಂಡಳಿ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷೆ ಉಮಾದೇವಿ, ಮುಖಂಡರಾದ ಮನು, ರಮೇಶ್, ಶ್ರೀನಿವಾಸ್, ಪ್ರಕಾಶ್ ಇತರರಿದ್ದರು.