ಜಿಲ್ಲೆ

ಎಸ್​ಎಸ್​ಕೆ ಮಂಗಲಕಾರ್ಯ ಸಮಿತಿಯಿಂದ ಧಾರ್ವಿುಕ ಕಾರ್ಯಕ್ರಮ, 24ರಂದು ಸಾಮೂಹಿಕ ಉಪನಯನ

ಹುಬ್ಬಳ್ಳಿ: ಇಲ್ಲಿಯ ಸಹಸ್ರಾರ್ಜುನ ಮಂಗಲಕಾರ್ಯ ಸಮಿತಿ ವತಿಯಿಂದ ಅಖಿಲ ಭಾರತ ಎಸ್​ಎಸ್​ಕೆ ಸಮಾಜ ಬಾಂಧವರ ಸಾಮೂಹಿಕ ಉಪನಯನ ಹಾಗೂ ವಿವಾಹ ಸಮಾರಂಭವನ್ನು ಫೆ. 24ರಂದು ನಗರದ ನೆಹರು ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಭಾಸ್ಕರ ಜಿತೂರಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಗಣ್ಯರ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ- ಧಾರವಾಡ, ರಾಣೆಬೆನ್ನೂರ, ಹರಿಹರ, ಗದಗ, ಬೆಟಗೇರಿ, ಬಾದಾಮಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸಾತಾರ, ಮುಂಬೈ ಸೇರಿ ವಿವಿಧೆಡೆಯಿಂದ 150ಕ್ಕೂ ಹೆಚ್ಚು ಜನರು ಉಪನಯನಕ್ಕೆ ನೋಂದಣಿ ಮಾಡಿಸಿದ್ದಾರೆ. ಸಾಮೂಹಿಕ ವಿವಾಹಕ್ಕೆ ಇದುವರೆಗೆ 6 ಜೋಡಿಗಳು ನೋಂದಣಿ ಆಗಿದ್ದು, ಇನ್ನಷ್ಟು ಜನರು ಬರುವ ನಿರೀಕ್ಷೆ ಇದೆ ಎಂದರು.

ಸಮಾಜದ ವೆಂಕಟೇಶ ರಾಯಬಾಗಿ, ಸ್ಕೈಟೌನ್ ಸಮೂಹದ ಸಾಯಿಪ್ರಸಾದ ಕಲಬುರ್ಗಿ, ಚೇತನ ಪವಾರ ಸೇರಿ ಅನೇಕ ಗಣ್ಯರು, ದಾನಿಗಳು ದೇಣಿಗೆ ನೀಡಿದ್ದಾರೆ. 1983ರಲ್ಲಿ ಸ್ಥಾಪನೆಯಾದ ಸಮಿತಿಯು ಇದುವರೆಗೆ 10 ಬಾರಿ ಸಾಮೂಹಿಕ ಉಪನಯನ, ವಿವಾಹ ನೆರವೇರಿಸಿದೆ. ಇಲ್ಲಿವರೆಗೆ 4,073 ಉಪನಯನ, 1,161 ವಿವಾಹ ಮಾಡಲಾಗಿದೆ ಎಂದು ತಿಳಿಸಿದರು.

ಫೆ. 17ರಂದು ಬೆಳಗ್ಗೆ 9ಕ್ಕೆ ದಾಜಿಬಾನ ಪೇಟೆಯ ತುಳಜಾಭವಾನಿ ದೇವಸ್ಥಾನದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 23ರಂದು ವಟುಗಳಿಗೆ ಗುರುತಿನ ಚೀಟಿ ನೀಡುವುದು, ಕಂಕಣ, ಅರಿಷಿಣ ಹಚ್ಚುವುದು, ಬಟ್ಟೆ, ಇತರೆ ಸಾಮಗ್ರಿ ನೀಡುವ ಕಾರ್ಯಕ್ರಮ ನಡೆಯಲಿವೆ ಎಂದರು.

ಫೆ. 24ರಂದು ಜರುಗುವ ಸಮಾರಂಭದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ಪಂ. ಮುಕುಂದಾಚಾರ್ಯ ಹಯಗ್ರೀವ ಅವರು ಗುರುಬೋಧನೆ ಮಾಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು.

ಅಖಿಲ ಭಾರತ ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಖೋಡೆ, ಶಾಸಕ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ, ಮಾಜಿ ಶಾಸಕ ಅಶೋಕ ಕಾಟವೆ, ಸತೀಶ ಮೆಹರವಾಡೆ ಅನೇಕ ಗಣ್ಯರು ಭಾಗವಹಿಸುವರು ಎಂದರು.

ಸಮಿತಿ ಗೌರವ ಕಾರ್ಯದರ್ಶಿ ಶ್ರೀನಾಥ ಪವಾರ, ಗೌರವ ಸಹ ಕಾರ್ಯದರ್ಶಿ ಜಿ.ವಿ. ಜಿತೂರಿ, ಕೋಶಾಧ್ಯಕ್ಷ ಲಕ್ಷ್ಮಣ ದಲಬಂಜನ, ಉಪಾಧ್ಯಕ್ಷ ವಿ.ಟಿ. ಬದ್ದಿ, ಎನ್.ಆರ್. ಕಾಟೀಗರ, ವಿ.ಎ. ರತನ, ಎಫ್.ಕೆ. ದಲಬಂಜನ ಇದ್ದರು.