ಜಿಲ್ಲೆ

ಎಸ್ಎಸ್ ಮಲ್ಲಿಕಾರ್ಜುನ, ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಕೊಡಿ

ಡಿ. ಎಂ. ಮಹೇಶ್

ದಾವಣಗೆರೆ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮೂರು ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿರುವ ಸಲೀಂ ಅಹ್ಮದ್ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಕಲ್ಪಿಸುವಂತೆ ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆಗ್ರಹಿಸಿದ್ದಾರೆ.

ಕಳೆದ 4 ದಶಕದಿಂದ ಪಕ್ಷ ಸಂಘಟನೆಯಲ್ಲಿ ದಕ್ಷತೆಯಿಂದ ತೊಡಗಿಕೊಂಡಿರುವ ಸಲೀಂ ಅಹ್ಮದ್, ಎನ್‌ಎಸ್‌ಯುಐನಲ್ಲಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಮುಖ್ಯ ಸಚೇತಕರಾಗಿ, ಮನಮೋಹನಸಿಂಗ್ ಸರ್ಕಾರದಲ್ಲಿ ನೆಹರು ಯುವ ಕೇಂದ್ರದ ಡೈರೆಕ್ಟರ್ ಜನರಲ್ ಹುದ್ದೆ ನಿಭಾಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದವಧಿಯಲ್ಲಿ ಕ್ಯಾಬಿನೆಟ್ ದರ್ಜೆಯ ದೆಹಲಿ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಾವಣಗೆರೆ ನಂಬರ್ ಒನ್ ಜಿಲ್ಲೆಯಾಗಲು ಶ್ರಮಿಸಿರುವ ಎಸ್‌ಎಸ್.ಮಲ್ಲಿಕಾರ್ಜುನ್, ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈ ಇಬ್ಬರಿಗೂ ಪ್ರಮುಖ ಖಾತೆಗಳನ್ನು ನೀಡಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿ ಸಿಎಂ ಮತ್ತು ಡಿಸಿಎಂ ಆಗಿ ಸರ್ಕಾರ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ರಾಜ್ಯದಲ್ಲಿನ ಬಿಜೆಪಿ, ಜೆಡಿಎಸ್‌ನ ಸಂಸದರಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹ್ಮದ್ ಜಿಕ್ರಿಯಾ, ಕೆ.ಎಂ. ಮಂಜುನಾಥ, ಕೆ.ಜಿ.ರಹಮತ್ ಉಲ್ಲಾ, ಬಿ.ಎಂ.ವಿನಾಯಕ್, ಸಂದೇಶ ನಾಯಕ್, ಬಿ.ಎಚ್.ಉದಯಕುಮಾರ್, ಬಿ.ಎಸ್. ಸುರೇಶ್. ಡಿ.ಶಿವಕುಮಾರ್ ಇದ್ದರು.

----