ಕಮಲನಗರದ ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯಕ್ಕೆ `ಬಿ' ಗ್ರೇಡ್ ಬರಲು ಕಾರಣರಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯೊಂದಿಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಂಕುಶ ಢೋಲೆ, ಸ್ಥಳೀಯ ಆಡಳಿತಾಧಿಕಾರಿ ಉಲ್ಲಾಸ ಜಾಜೆ, ಪ್ರಾಚಾರ್ಯ ಡಾ.ದೇವಋಷಿ ಇದ್ದರು. 
ಜಿಲ್ಲೆ

ಎಸ್‌ಎಸ್ ಡಿಗ್ರಿ ಕಾಲೇಜಿಗೆ `ಬಿ' ಗ್ರೇಡ್ ಗರಿ

ಕಮಲನಗರ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದತ್ತ ಮುಂದುವರಿದ ಹೆಜ್ಜೆಯಾಗಿ ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಪದವಿ ಕಾಲೇಜು, ದ್ವಿತೀಯ ಚಕ್ರದ ಮೌಲ್ಯಮಾಪನದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)ಯಿಂದ `ಬಿ' ಗ್ರೇಡ್ ಹಾಗೂ ಸಿಜಿಪಿಎ ೨.೩೧ರೊಂದಿಗೆ ಮಾನ್ಯತೆ ಗಳಿಸಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ಉಲ್ಲಾಸ ಜಾಜೆ ತಿಳಿಸಿದ್ದಾರೆ.

೨೦೨೫ರ ಮೇ ೨೭, ೨೮ರಂದು ನ್ಯಾಕ್ ತಂಡ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿವಿಧ ಗುಣಮಟ್ಟದ ಮಾನದಂಡಗಳ ಪ್ರಕಾರ ಪ್ರಾಮಾಣಿಕವಾಗಿ ಮೌಲ್ಯಮಾಪನ ನಡೆಸಿರುವುದು ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ, ಸಮಗ್ರ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣ ಸಂಕಲ್ಪದ ಪ್ರತಿಬಿಂಬವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಶಂಸನೀಯ ಸಾಧನೆಗೆ ಆಡಳಿತಾಧಿಕಾರಿ ಉಲ್ಲಾಸ ಜಾಜೆ, ಐಕ್ಯುಎಸಿ ಸಂಯೋಜಕ ಡಾ.ಮಂಜುನಾಥ ಮತ್ತು ನ್ಯಾಕ್ ಸಂಯೋಜಕ ಪ್ರವೀಣ್ ಶಿಂಧೆ ಅವರ ನೈಪುಣ್ಯಯುತ ನೇತೃತ್ವ ಕಾರಣವಾಗಿದ್ದು, ಬೋಧಕ-ಬೋಧಕೇತರ ಸಿಬ್ಬಂದಿ, ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳ ಅನಂತ ಸಹಕಾರ ಕಾರಣ ಎಂದು ಪ್ರಾಚಾರ್ಯ ಡಾ.ದೇವಋಷಿ ವೈ. ಹೇಳಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಯಾದ ಸಂಸದ ಸಾಗರ್ ಖಂಡ್ರೆ ಅವರು ಗ್ರಾಮೀಣ ಪ್ರದೇಶದ ಶಿಕ್ಷಣ ಮಟ್ಟವನ್ನು ಉತ್ತುಂಗಕ್ಕೇರಿಸಲು ಕೈಗೊಂಡ ಕ್ರಮವನ್ನು ಶ್ಲಾಘಿಸಿದ್ದಾರೆ.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯ ಗ್ರಾಮೀಣ ಯುವಕರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾಲೇಜಿಗೆ `ಬಿ' ಗ್ರೇಡ್ ಮಾನ್ಯತೆ ದೊರಕಿರುವುದು ಸಂತಸದ ವಿಷಯ. ಕಾಲೇಜಿನ ಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನಾರ್ಹರು. ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ವಿಕಾಸಕ್ಕೆ ತಮ್ಮ ಸಂಪೂರ್ಣ ಸಹಕಾರವಿರಲಿದೆ.

| ಈಶ್ವರ ಖಂಡ್ರೆ

ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ