ಜಿಲ್ಲೆ

ಎಸ್‌ಎಂಕೆ ಅಂತಹ ರಾಜಕಾರಣಿ ಬರಲು ಸಾಧ್ಯವಿಲ್ಲ : ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್

ಮೈಸೂರು: ಸಿನಿಮಾ ಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್ ಹೇಗೆ ಒಬ್ಬರೇ ಧೃವತಾರೆಯೋ ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ಸಜ್ಜನಿಕೆಗೆ ಹೆಸರಾಗಿದ್ದವರು ಮಾಜಿ ಮುಖ್ಯಮಂತ್ರಿ ದಿ. ಎಸ್.ಎಂ.ಕೃಷ್ಣ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಬಣ್ಣಿಸಿದರು.

ಮೆಸೂರು ನಗರ ಮತ್ತು ಜಿಲ್ಲಾ ನಾಗರಿಕ ಸಮಿತಿ, ಮಂಡ್ಯ ಜಿಲ್ಲಾ ಬಳಗದಿಂದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಜಂಗಮ ಸ್ವರೂಪಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸಾಧನೆಗಳು ಪ್ರಾತಃ ಸ್ಮರಣೀಯ ಆಗಿರುತ್ತವೆ. ಅಂತಹ ಮತ್ತೊಬ್ಬ ರಾಜಕಾರಣಿ ಬರಲು ಸಾಧ್ಯವಿಲ್ಲ ಎಂದರು.

ಬಹಳ ಶಿಸ್ತಿನ ವ್ಯಕ್ತಿಯಾಗಿದ್ದ ಕೃಷ್ಣ ಅವರು, ದುಬಾರಿ ಬಟ್ಟೆ ವಿಷಯದಲ್ಲಿ ಎಂದಿಗೂ ರಾಜೀ ಆಗುತ್ತಿರಲಿಲ್ಲ. ಬಹಳಷ್ಟು ಸಂದರ್ಭದಲ್ಲಿ ಪದ ಬಳಕೆ ಸರಿ ಇಲ್ಲದಿದ್ದಾಗ ಅದಕ್ಕೆ ಕ್ಷಮೆ ಕೇಳುತ್ತಿದ್ದ ಔದಾರ್ಯ ಅವರಲ್ಲಿತ್ತು. ಯಾವ ಕಲ್ಮಶವೂ ಅವರಿಗೆ ಇರುತ್ತಿರಲಿಲ್ಲ. ಯಾವುದೇ ಪದವಿಗಳನ್ನು ಅವರು ಹುಡುಕಿಕೊಂಡು ಹೋಗಿರಲಿಲ್ಲ. ಎಲ್ಲವೂ ಅವರನ್ನು ಬಯಸಿ ಬಂದಿದ್ದವು ಎಂದು ಹೇಳಿದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಜಾರಿಗೆ ತಂದ ಯೋಜನೆಗಳು ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಮಧ್ಯಾಹ್ನ ಬಿಸಿಯೂಟ ಜಾರಿಗೊಳಿಸಿದ್ದು, ಯಶಸ್ವಿನಿ ಆರೋಗ್ಯ ಯೋಜನೆ ಜಾರಿಗೊಳಿಸಿದ್ದು, ಸ್ತ್ರೀಶಕ್ತಿ, ಶಿಕ್ಷಣ ಸೇರಿದಂತೆ ಇನ್ನಿತರ ಕ್ಷೇತ್ರದ ಸಾಧನೆ ಈಗಲೂ ಜನರ ನೆನಪಿನಲ್ಲಿ ಉಳಿಯುವಂತವು ಎಂದರು.

1962ರಲ್ಲಿ ದೇವೇಗೌಡರು ಮತ್ತು ಎಸ್.ಎಂ.ಕೃಷ್ಣ ಇಬ್ಬರೂ ಒಟ್ಟಿಗೆ ರಾಜಕಾರಣಕ್ಕೆ ಬಂದರು. ಒಬ್ಬರು ಮಾಸ್, ಮತ್ತೊಬ್ಬರು ಕ್ಲಾಸ್. 1984ರಲ್ಲಿ ಕೃಷ್ಣ ಅವರು ಸಂಸದರಾಗಿ ಆಯ್ಕೆ ಆಗಿದ್ದರೆ ರಾಷ್ಟ್ರಮಟ್ಟದಲ್ಲಿ ಉನ್ನತ ಪದವಿಗೆ ಏರುತ್ತಿದ್ದರು. ಆದರೆ ಮಂಡ್ಯ ಜನ ಅದಕ್ಕೆ ಅವಕಾಶ ನೀಡಲಿಲ್ಲ. ಮಂಡ್ಯದ ಶೈಲಿಯೇ ಹಾಗೆ. ಗೆಲ್ಲಿಸುವ ಸಂದರ್ಭದಲ್ಲಿ ಸೋಲಿಸುತ್ತಾರೆ. ಸೋತು ರಾಜಕೀಯ ನಿವೃತ್ತಿ ಆಗುತ್ತಾರೆ ಎನ್ನುವ ಸಂದರ್ಭದಲ್ಲಿ ಗೆಲ್ಲಿಸುತ್ತಾರೆ ಎಂದು ಹಾಸ್ಯವಾಗಿ ತಿವಿದರು.

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಎಸ್.ಎಂ.ಕೃಷ್ಣ ಜಾತಿ ರಾಜಕಾರಣ ಮಾಡಿದವರಲ್ಲ. ಸಚಿವ ಸಂಪುಟದಲ್ಲಿ ಸಚಿವನಾಗುವೆ ಎಂಬ ಕನಸು ಕಂಡಿರಲಿಲ್ಲ. ಆದರೆ ಮಹತ್ವದ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದ್ದನ್ನು ನನ್ನ ಜೀವನದಲ್ಲಿ ಮರೆಯಲಾಗದು ಎಂದರು.

ಎಂದಿಗೂ ಭ್ರಷ್ಟಾಚಾರದ ರಾಜಕಾರಣ ಮಾಡಲಿಲ್ಲ. ಮಹಾಭಾರತದಲ್ಲಿ ಕೃಷ್ಣ ಮಾಡಿದ ಚಾಕಚಾಕತೆಯನ್ನು ಕಲಿಯುಗದಲ್ಲಿ ಎಸ್.ಎಂ.ಕೃಷ್ಣ ಮಾಡಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆಗಿದ್ದರೆ ರಾಜಕೀಯ ಜೀವನ ಪೂರ್ಣವಾಗುತ್ತಿತ್ತು. ಬೆಂಗಳೂರಿನಲ್ಲಿ ಒಂದು ಬಡಾವಣೆಗೆ ಎಸ್.ಎಂ.ಕೃಷ್ಣ ಮತ್ತು ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಹಳೆಯ ವರ್ತುಲ ರಸ್ತೆ ಅಥವಾ ಬೇರೊಂದು ರಸ್ತೆಗೆ ಕೃಷ್ಣ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಈಗ ರಾಜಕೀಯವನ್ನು ಸಂಯಮದಿಂದ ಮಾಡುವುದು ಕಷ್ಟ. ಆದರೆ ಸುಧೀರ್ಘವಾಗಿ ಸಂಯಮದಿಂದ ರಾಜಕೀಯ ಜೀವನದಲ್ಲಿ ಎಸ್.ಎಂ.ಕೃಷ್ಣ ಎಂದೂ ಸಂಯಮ ಕಳೆದುಕೊಳ್ಳಲಿಲ್ಲ. ಎಂತಹದ್ದೇ ಸನ್ನಿವೇಶ ಬಂದರೂ ತಾಳ್ಮೆ ಹಾಗೂ ಜಾಣ್ಮೆಯಿಂದ ನಡೆದುಕೊಳ್ಳುತ್ತಿದ್ದರು ಎಂದರು.

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ. ರಾಜಶೇಖರ್ ಮಾತನಾಡಿ, ಕೌಟುಂಬಿಕ ಹಿನ್ನೆಲೆ, ಪ್ರಾಥಮಿಕ ಶಿಕ್ಷಣ, ಆಮೆರಿಕಾದಲ್ಲಿ ವ್ಯಾಸಂಗ ಮಾಡಿದ ಅವರು ಚಿಕ್ಕ ವಯಸ್ಸಿನಲ್ಲಿಯೇ ಮೌಲ್ಯಗಳನ್ನು ರೂಢಿಸಿಕೊಂಡವರು. ದೂರ ದೃಷ್ಟಿ, ಜನರ ಸೇವೆ, ನೀತಿ ನಿಯಮಗಳ ಮೂಲಕ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ ಎಂದರು.

ದೇವರಾಜು ಅರಸು ಬಲವಂತವಾಗಿ ಕೃಷ್ಣ ಅವರನ್ನು ತಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದರು. ದಕ್ಷವಾಗಿ ಕಾರ್ಯನಿರ್ವಹಿಸಿ ಜನಮುಖಿಯಾದರು. ಅತ್ಯುನ್ನತ ರಾಜಕೀಯ ಗುಣವನ್ನು ಪಡೆದಿದ್ದರು. ಮುಖ್ಯಮಂತ್ರಿಯಾಗಿ ಹೊಸ ನಿಯಮ, ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬ್ರಾೃಂಡ್ ಬೆಂಗಳೂರಿಗೆ ತಳಪಾಯ ಹಾಕಿದರು. ಇಂದು ಬೆಂಗಳೂರು ವಿಶ್ವದಲ್ಲಿ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಳ್ಳಲು ಎಸ್.ಎಂ.ಕೃಷ್ಣ ಕಾರಣ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್, ಶಾಸಕ ಕೆ. ಹರೀಶ್ ಗೌಡ, ಮೆಸೂರು ವಿವಿ ಪ್ರಸಾರಾಂಗದ ಮಾಜಿ ನಿರ್ದೇಶಕ ಕೆ.ಟಿ.ವೀರಪ್ಪ, ಮುಖಂಡ ಜಯರಾಂ ಕೀಲಾರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಪ್ರೊ.ಕೆ.ಕಾಳಚನ್ನೇಗೌಡ, ಪ್ರೊ.ಚಂದ್ರಶೇಖರಗೌಡ, ಡಾ.ಈ.ಸಿ. ನಿಂಗರಾಜ್ಗೌಡ, ಸುರೇಶ್‌ಗೌಡ, ಸತೀಶ್, ಎಚ್.ಅರವಿಂದ್, ಜಿ.ಪ್ರಕಾಶ್, ಎ.ಸಿ.ಲಕ್ಷ್ಮಣ್, ಎಚ್.ಎಂ.ಗೌಡಪ್ಪ, ಕೆ.ಎಸ್.ಕೃಷ್ಣ, ಬಿ.ಪಿ.ಸುರೇಶ್, ಜೆ.ಬಿ. ರಂಗಸ್ವಾಮಿ, ಮಲ್ಲೇಶ್ ಇತರರು ಇದ್ದರು.