oppo_2 
ಜಿಲ್ಲೆ

ಎಸ್.ಮಹೇಶ್ ಮೈತ್ರಿಕೂಟದ ಅಭ್ಯರ್ಥಿ

ಮದ್ದೂರು: ಫೆಬ್ರವರಿ 2ರಂದು ನಡೆಯುವ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್)ದ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ (ಎನ್‌ಡಿಎ) ಮೈತ್ರಿಕೂಟದ ಅಭ್ಯರ್ಥಿಯಾಗಿ ಎಸ್.ಮಹೇಶ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಇದರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲವೆಂದು ಮಾಜಿ ಶಾಸಕ ಸುರೇಶ್‌ಗೌಡ ಸ್ಪಷ್ಟಪಡಿಸಿದರು.

ಜೆಡಿಎಸ್‌ನಿಂದ ಕೋಣಸಾಲೆ ಮಧು ಅವರು ನಿರ್ದೇಶಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು, ಅವರಿಗೆ ಮುಂದೆ ಪಕ್ಷದಿಂದ ಉನ್ನತ ಸ್ಥಾನಮಾನಗಳನ್ನು ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅವರು ಚುನಾವಣೆಯಲ್ಲಿ ಎಸ್.ಮಹೇಶ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಕೋಣಸಾಲೆ ಮಧು ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿತರಿದ್ದರು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್.ಮಹೇಶ್ ಅವರನ್ನು ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಎಸ್.ಮಹೇಶ್ ಅವರು ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಮಹೇಶ್ ಅವರನ್ನು ವರಿಷ್ಠರು ಆಯ್ಕೆ ಮಾಡಿದ್ದಾರೆ. ಎನ್ ಡಿಎ ಮಿತ್ರ ಪಕ್ಷಕ್ಕೆ ಒಂದು ನಿರ್ದೇಶಕ ಸ್ಥಾನವನ್ನು ನೀಡಲಾಗಿದೆ ಎಂದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಹೈನುಗಾರಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪಾರ ಕೊಡುಗೆ ನೀಡಿದ್ದಾರೆ. ರೈತರ ಸಮಗ್ರ ಅಭಿವೃದ್ಧಿ ಜೆಡಿಎಸ್ ಪಕ್ಷದಿಂದ ಮಾತ್ರ ಎಂಬುವುದು ಈಗಾಗಲೇ ರೈತರಿಗೆ ಗೊತ್ತಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಮಹೇಶ್ ಅವರನ್ನು ಹೆಚ್ಚಿನ ಮತಗಳ ಅಂತರ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಎಸ್.ಮಹೇಶ್, ಮುಖಂಡರಾದ ಕೋಣಸಾಲೆ ಮಧು, ಅಂಕನಾಥಪುರ ಬಿಳಿಯಪ್ಪ ಇತರರು ಇದ್ದರು.

ಗದ್ದುಗೆ ಹಿಡಿಯಲು ಕಾಂಗ್ರೆಸ್ ದುರ್ಮಾರ್ಗ: ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮನ್‌ಮುಲ್ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಗಂಭೀರ ಆರೋಪ ಮಾಡಿದರು.

ಮನ್‌ಮುಲ್ ಚುನಾವಣೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್‌ಗೆ ಮತ ನೀಡದ ಸಹಕಾರ ಸಂಘಗಳನ್ನು ಸೂಪರ್ ಸೀಡ್ ಮಾಡುವ ಮನ್‌ಮುಲ್ ನಿರ್ದೇಶಕರ ಚುನಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಧಿಕಾರಿ ಹಿಡಿಯಲು ಕಾಂಗ್ರೆಸ್‌ನವರು ಹವಣಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಹಾಲು ಒಕ್ಕೂಟದಲ್ಲಿ ಈ ಹಿಂದೆ ನಡೆದಿರುವ ಹಾಲಿಗೆ ನೀರು ಬೆರೆಸುವ ಪ್ರಕರಣದ ಅಕ್ರಮ ಹಾಗೂ ಇನ್ನಿತರರ ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕರು ಈ ಅಧಿಕಾರದಲ್ಲಿದ್ದರು ಈ ಬಗ್ಗೆ ಏಕೆ? ಧ್ವನಿ ಎತ್ತುತ್ತಿಲ್ಲ ಹಾಗೂ ಕ್ರಮ ಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮುಖಂಡರಾದ ಕೋಣಸಾಲೆ ಮಧು, ಅಂಕನಾಥಪುರ ಬಿಳಿಯಪ್ಪ ಇತರರು ಇದ್ದರು.