ಚಾಮರಾಜನಗರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಅಗ್ರಿಕಲ್ಚರಲ್ ಕಮರ್ಷಿಯಲ್ ಬ್ರಾಂಚ್) ಮತ್ತು ಸಂತೇಮರಹಳ್ಳಿ ಶಾಖೆಯ ಸಹಯೋಗದಲ್ಲಿ ಅನ್ನದಾತ ಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಹರದನಹಳ್ಳಿ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಹಮ್ಮಿಕೊಳ್ಳಲಾಗಿತ್ತು.
ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ. ಪ್ರಮೋದ್ ಅವರು ಕೃಷಿ ಸಂಬಂಧಿತ ಸಾಲ ಕುರಿತು ಮಾಹಿತಿ ನೀಡಿದರು. ಎಸ್‍ಬಿಐ ಕೆ.ಎಸ್.ಆರ್. ಕೃಷಿ ಸಾಲ, ಬ್ಯಾಂಕ್ ವಿಮಾ ಯೋಜನೆಗಳಾದ ಜೀವನ್ ಜ್ಯೋತಿ, ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಬಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯ ಸೌಲಭ್ಯಗಳ ಕುರಿತು ತಿಳಿಸಿಕೊಟ್ಟರು.
ಶಾಖಾ ವ್ಯವಸ್ಥಾಪಕರು, ಬ್ಯಾಂಕಿನ ಗ್ರಾಹಕರು ಹಣಕಾಸಿನ ವ್ಯವಹಾರ ನಿರ್ವಹಿಸಿದರೆ ಸಾಲದು, 18 ರಿಂದ 50 ವರ್ಷದೊಳಗಿನ ಎಲ್ಲಾ ಗ್ರಾಹಕರು 436 ವಿಮೆ ಪಾಲಿಸಿ ಮತ್ತು 18 ರಿಂದ 70 ವರ್ಷದೊಳಗಿನವರು 20 ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರ ದಿನಾಚರಣೆ ಅಂಗವಾಗಿ ಎಸ್‍ಬಿಐ ಬ್ಯಾಂಕಿನ ವಿವಿಧ ಕೃಷಿ ಸಾಲದ ಸೌಲಭ್ಯಗಳನ್ನು ವಿವರಿಸಲಾಯಿತು. ಎಸ್.ಬಿ.ಐ.ಗೆ ವರ್ಷಕ್ಕೆ 436 ರೂ. ವಿಮೆ ಪಾವತಿಸಿ ಜೀವನ್ ಜ್ಯೋತಿ ವಿಮಾ ಯೋಜನೆ ಪಡೆದಿದ್ದ ಒಂದೇ ವರ್ಷದಲ್ಲಿ ಮೃತಪಟ್ಟ ಅಂಕನಶೆಟ್ಟಿಪುರದ ಸುಜಾತ ಜಯಮಾಲ, ಹರದನಹಳ್ಳಿಯ ರೂಪಾ ಅವರ ನಾಮಿನಿ ಪತಿ ಲಿಂಗರಾಜುರವರಿಗೆ ಹಾಗೂ ಕೂಡ್ಲೂರಿನ ಬಸವಣ್ಣನವರ ಪತ್ನಿ ಪಾರ್ವತಮ್ಮ ಅವರಿಗೆ ತಲಾ 2 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು.
ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೃಷಿ ಚಟುವಟಿಕೆ ಕುರಿತ ಸಂವಾದ ಏರ್ಪಡಿಸಲಾಗಿತ್ತು. ಅತಿಥಿಗಳಾಗಿ ಕೆವಿಕೆ ಹಿರಿಯ ವಿಜ್ಞಾನಿ ಪಂಪನಗೌಡ, ರೈತ ಮುಖಂಡರಾದ ನಟರಾಜು, ಎಸ್‍ಬಿಐ ಪ್ರಾದೇಶಿಕ ವಲಯದ ಮುಖ್ಯ ವ್ಯವಸ್ಥಾಪಕರಾದ ಅಭಿಷೇಕ್ ಕುಮಾರ್ ಕೇಸರಿ, ಏಕೀಕೃತ ಸಾಲ ಮಂಜೂರಾತಿ ಕೇಂದ್ರದ ವ್ಯವಸ್ಥಾಪಕರಾದ ನೀತಾ ಆಚಾರ್ಯ, ಅನಿತಾ, ಸಂತೇಮರಹಳ್ಳಿ ಶಾಖೆಯ ವ್ಯವಸ್ಥಾಪಕರಾದ ಪ್ರತಾಪ್, ಎಫ್‍ಐ ವ್ಯವಸ್ಥಾಪಕರಾದ ಪವನ್ ತೇಜ್, ಇಂಟಿಗ್ರಾ ಸಂಸ್ಥೆಯ ಕೆ.ಎಸ್. ಸಿದ್ದರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.