ಜಿಲ್ಲೆ

ಎಸ್.ನಂಜುಂಡಸ್ವಾಮಿ ಸೇವೆ ಸ್ಮರಣೀಯ

ಚಾಮರಾಜನಗರ: ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಿರಿಯ ದಲಿತ ಮುಖಂಡ ದಿ.ಎಸ್.ನಂಜುಂಡಸ್ವಾಮಿ ಅವರ ಸೇವೆ ಸದಾಕಾಲವೂ ಸ್ಮರಣೀಯ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ನಗರಸಭೆ ಮುಂಭಾಗ ದಿ.ಎಸ್.ನಂಜುಂಡಸ್ವಾಮಿ ಪುಣ್ಯ ಸ್ಮರಣೆಯ ಅಂಗವಾಗಿ ಅಂಬೇಡ್ಕರ್ ಸೇನೆ ವತಿಯಿಂದ ಗುರುವಾರ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್.ನಂಜುಂಡಸ್ವಾಮಿ ಅವರು ಪುರಸಭೆ ಮತ್ತು ನಗರಸಭೆಯಲ್ಲಿ 9 ಬಾರಿ ಆಯ್ಕೆಯಾಗುವ ಮೂಲಕ ಹಲವಾರು ಜನಪರವಾದ ಕಾರ್ಯಗಳನ್ನು ಮಾಡಿದ್ದರು. ಅವರ ಶ್ರಮದ ಫಲವಾಗಿ ಜಿಲ್ಲಾ ಕೇಂದ್ರದ ಪ್ರಮುಖ ರಸ್ತಗಳು ಅಭಿವೃದ್ಧಿಗೊಂಡಿದ್ದವು. ನನ್ನ ರಾಜಕೀಯ ಜೀವನದಲ್ಲಿ ಸದಾಕಾಲವೂ ಬೆನ್ನೆಲುಬಾಗಿ ನಿಂತಿದ್ದರು. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿ, ಜಿಲ್ಲೆಯ ರಾಜಕಾರಣದಲ್ಲಿ ಎಸ್.ನಂಜುಂಡಸ್ವಾಮಿ ಅವರು ತನ್ನದೇಯಾದ ಹಿಡಿತವನ್ನು ಸಾಧಿಸಿದ್ದರು. ಈ ಮೂಲಕ ಜನಾಂಗದ ಆಗು-ಹೋಗುಗಳಿಗೆ ಸ್ಪಂದನೆ ಮಾಡುತ್ತಿದ್ದರು. ಅವರ ಸೇವಾಮನೋಭಾವ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಜಯಶಂಕರ್, ಕಾರ್ಯಾಧ್ಯಕ್ಷ ಅಮಚವಾಡಿ ಶಿವಣ್ಣ, ತಾಲೂಕು ಉಪಾಧ್ಯಕ್ಷ ಅಮಿತ್, ಮುಖಂಡರಾದ ಶಿವರಾಜು, ನಾಗರಾಜು, ನಟರಾಜ್, ಕಾಗಲವಾಡಿ ಚಂದ್ರು, ಮಹದೇವಯ್ಯ, ಉಮ್ಮತ್ತೂರು ಚಂದ್ರು, ಶಿವಣ್ಣ, ಯುವ ಮುಖಂಡ ಅಕ್ಷಯ್ ಕುಮಾರ್ ಹಾಗೂ ಇತರರು ಹಾಜರಿದ್ದರು.