ಜಿಲ್ಲೆ

ಎಸ್.ಎಲ್. ಘೊಟ್ನೇಕರ ನಾಮಪತ್ರ ಸಲ್ಲಿಕೆ

ಸುಭಾಸ ಹೆಗಡೆ ಧೂಪದಹೊಂಡ

ಹಳಿಯಾಳ: ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿರುವ ಎಸ್.ಎಲ್. ಘೊಟ್ನೇಕರ ಅವರು ಗುರುವಾರ ಹಳಿಯಾಳದ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಚುನಾವಣೆಗಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಹಲವರಿಂದ ಉಮೇದುವಾರಿಕೆ: ರೈತ ಸೇವಾ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ ನಾಮಪತ್ರ ಸಲ್ಲಿಸಿದರು. ಮರು ಆಯ್ಕೆ ಬಯಸಿ ರೇಷ್ಮಾ ಮಾರುತಿ ಪಾಟೀಲ, ಕ್ಷತ್ರಿಯ ಮರಾಠ ಪರಿಷತ್ ಕಾರ್ಯದರ್ಶಿಯಾಗಿರುವ ಬಾಳಕೃಷ್ಣ ಶಹಾಪುರಕರ, ಲತೀಫಷಾ ಕರಿಮಷ್ಯಾ ಲತಿಪ್ಪಣ್ಣನವರ, ಮಂಜುನಾಥ ಶಿವಾಜಿ ಬಂಡಿವಾಡ, ಬಸವರಾಜ ಬಸವಣೆಪ್ಪ ಮಡ್ಡಿ, ಚನ್ನಪ್ಪ ಹನುಮಂತ ಮಡ್ಡಿ, ಸಂಜೀವ ಓಮಣ್ಣ ಗೌಡ, ರುಕ್ಮಾ ಮಹಾಬಲೇಶ್ವರ ಭಾಗವತಕರ ಹಾಗೂ ವಿನೋದ ಗಿಂಡೆ ಸೇರಿ ಒಟ್ಟು 11 ಅಭ್ಯರ್ಥಿಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಪಿ.ಐ ಮಾನೆಯವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ 12 ಸ್ಥಾನಗಳಿಗೆ ಜ. 18ರಂದು ಚುನಾವಣೆ ನಡೆಯಲಿದ್ದು, ಜ. 10 ನಾಮಪತ್ರ ಸಲ್ಲಿಸಲು ಕೊನೆಯ ದಿನ. 11ರಂದು ನಾಮಪತ್ರ ಪರಿಶೀಲನೆ, 12ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದು, 18ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಹಾಗೂ ನಂತರ ಮತ ಏಣಿಕೆ ನಡೆಯಲಿದೆ.

ಕಾಂಗ್ರೆಸ್​ಗೆ ಗೆಲ್ಲುವ ವಿಶ್ವಾಸ
ಹಳಿಯಾಳ ತಾಲೂಕಿನಲ್ಲಿ ನಡೆಯಲಿರುವ 11 ಸೊಸೈಟಿಗಳ ಚುನಾವಣೆಯಲ್ಲಿ ಗೆಲವು ನಮ್ಮದೇ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವುದರಲ್ಲಿ ಸಂಶಯವೇ ಬೇಡ ಎಂದು ವಿ.ಪ ಸದಸ್ಯ ಎಸ್.ಎಲ್. ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ರೈತರು, ಕೃಷಿ ಕಾರ್ವಿುಕರು ಕಾಂಗ್ರೆಸ್ ಆಡಳಿತ ನೋಡಿದ್ದಾರೆ. ಕೆಡಿಸಿಸಿ ಬ್ಯಾಂಕ್ ಮೂಲಕ ಸೊಸೈಟಿಗಳು ಸಲ್ಲಿಸುತ್ತಿರುವ ಆರ್ಥಿಕ ಸೇವಾ ಸಹಕಾರಗಳ ಬಗ್ಗೆ ರೈತವರ್ಗದಲ್ಲಿ ತೃಪ್ತಿ ಸಮಾಧಾನವಿದ್ದು, ರೈತ ವರ್ಗವೆಲ್ಲ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರಿ ಟ್ರೇಡ್ ಯೂನಿಯನ್ ಉಪಾಧ್ಯಕ್ಷ ರೈತ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ, ಸುಭಾನಿ ಗೋರಿಖಾನ ಇತರರು ಉಪಸ್ಥಿತರಿದ್ದರು.