ಬೀದರ್: ಸ್ವಸಹಾಯ ಗುಂಪು (ಎಸ್.ಎಚ್.ಜಿ)ಗಳ ರಚನೆ ಮೂಲಕ ಸಹಕಾರ ರಂಗದಲ್ಲಿ ಹೊಸ ಪ್ರಯೋಗ ಮಾಡಿದ್ದ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಇದೀಗ ಗುಂಪು ಸದಸ್ಯರ ಸಾಲಕ್ಕೆ ಜೀವ ವಿಮೆ ಮಾಡಿಸುವ ಮೂಲಕ ಗಮನ ಸೆಳೆದಿದೆ.
ಡಿಸಿಸಿ ಬ್ಯಾಂಕ್ ಮತ್ತು ಅದರ ವ್ಯಾಪ್ತಿಯ ಪಿಕೆಪಿಎಸ್ ಮೂಲಕ ಸಾಲ ಪಡೆದ ಸ್ವಸಹಾಯ ಗುಂಪಿನ ಸದಸ್ಯರ ಅನುಕೂಲಕ್ಕಾಗಿ ಜೀವ ವಿಮೆ ಪರಿಚಯಿಸಲಾಗಿದೆ. ಸಾಲ ಪಡೆದ ಸದಸ್ಯರು ಸಾವಿಗೀಡಾದಲ್ಲಿ ಕುಟುಂಬದವರ ಮೇಲೆ ಭಾರವಾಗಬಾರದು ಎಂಬ ಉದ್ದೇಶದಿಂದ ಭಾರತೀಯ ಜೀವ ವಿಮಾ ನಿಗಮದ ಸಹಭಾಗಿತ್ವದಲ್ಲಿ ಬ್ಯಾಂಕ್ ವಿಮೆ ಮಾಡಿಸಿದೆ. ಇದು ದೇಶದಲ್ಲೇ ಮೊದಲ ಪ್ರಯತ್ನ.
2022-23ರಲ್ಲಿ 1,02,747 ಎಸ್ಎಚ್ಜಿ ಸದಸ್ಯರನ್ನು ಜೀವ ವಿಮೆಗೆ ಒಳಪಡಿಸಲಾಗಿದೆ. ಬ್ಯಾಂಕ್ ಸಾಲ ಪಡೆದ ಜಿಲ್ಲೆಯ 14 ಸದಸ್ಯರು ಮೃತಪಟ್ಟಿದ್ದು, ಇದರಲ್ಲಿ 6 ಸದಸ್ಯರ ಕುಟುಂಬ ವಿಮೆ ಹಣ ಪಡೆದಿದೆ. ಬಸವಕಲ್ಯಾಣ ತಾಲೂಕಿನ ಮೂವರು, ಹುಮನಾಬಾದ್, ಭಾಲ್ಕಿ, ಕಮಲನಗರ ತಾಲೂಕಿನ ತಲಾ ಒಬ್ಬ ಸದಸ್ಯರ ಕುಟುಂಬದವರು ಒಟ್ಟು 3,50,000 ವಿಮಾ ಮೊತ್ತ ಪಡೆದಿದ್ದಾರೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2022-23ರಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಕಮ್ಮಿ ಬಡ್ಡಿ ದರದಲ್ಲಿ 603 ಕೋಟಿ ರೂ. ಸಾಲ ವಿತರಿಸಿದೆ. ಸಾಲ ಪಡೆದ ಹಲವರು ವ್ಯಾಪಾರದಲ್ಲಿ ಹಣ ದೊಡಗಿಸಿ ಆರ್ಥಿಕವಾಗಿ ಬಲಿಷ್ಠವಾಗಿದ್ದಾರೆ. 10ರಿಂದ 25 ಸಾವಿರವರೆಗೆ ಸಾಲ ಪಡೆದರೆ 97 ರೂ. ವಿಮೆ ಪ್ರೀಮಿಯಂ ಕಟ್ಟಬೇಕು. ಒಂದು ವೇಳೆ ಸಾಲ ಪಡೆದ ಸದಸ್ಯ ಮರಣ ಹೊಂದಿದರೆ 25 ಸಾವಿರ ರೂ. ವಿಮೆ ಬರಲಿದೆ. 25,001-50 ಸಾವಿರ ರೂ. ಸಾಲಕ್ಕೆ 194 ರೂ., 50,001-75 ಸಾವಿರ ರೂ.ಗೆ 291, 75,001-ಒಂದು ಲಕ್ಷ ರೂ.ವರೆಗೆ 384, 1-2 ಲಕ್ಷ ರೂ. ಸಾಲ ಪಡೆದರೆ 768 ಪ್ರೀಮಿಯಂ ಭರಿಸಬೇಕು.
ಸ್ವಸಹಾಯ ಸಂಘದ ಪರಿಕಲ್ಪನೆ ಯಶಸ್ವಿ ಜಾರಿಗೊಳಿಸಿ ಲಕ್ಷಾಂತರ ಬಡವರ ಬಾಳಿನಲ್ಲಿ ಬೆಳಕು ಮೂಡಿಸಿದವರು ದಿವಂಗತ ಡಾ.ಗುರುಪಾದಪ್ಪ ನಾಗಮಾರಪಳ್ಳಿ. ಸ್ವಸಹಾಯ ಸಂಘದಿಂದ ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಗತಿ ಕಾಣುತ್ತಿದೆ. ಮಹಿಳಾ ಸಬಲೀಕರಣ, ಜಿಲ್ಲೆಯ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಆರಂಭಿಸಿದ ಸ್ವಸಹಾಯ ಗುಂಪುಗಳು ಇಂದು ಬೃಹದಾಕಾರವಾಗಿ ಬೆಳೆದಿವೆ. 1996ರಲ್ಲಿ ಕೇವಲ 20 ಸದಸ್ಯರ ಒಂದು ಸಂಘ ರಚಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ ಸುಮಾರು 34 ಸಾವಿರ ಸಂಘಗಳು ರಚನೆಯಾಗಿವೆ. ಡಾ.ಗುರುಪಾದಪ್ಪ ನಿಧನದ ನಂತರ ಬ್ಯಾಂಕ್ ಸಾರಥ್ಯ ವಹಿಸಿಕೊಂಡ ಅವರ ಪುತ್ರ ಉಮಾಕಾಂತ ನಾಗಮಾರಪಳ್ಳಿ ಸಂಘಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕಿಕೊಂಡಿದ್ದಾರೆ.
ಬ್ಯಾಂಕ್ ಸಾಲ ಪಡೆದು ಆಕಸ್ಮಿಕವಾಗಿ ಮರಣ ಹೊಂದಿದರೆ ಸ್ವಸಹಾಯ ಗುಂಪಿನ ಸದಸ್ಯರ ಕುಟುಂಬಕ್ಕೆ ಭಾರವಾಗಬಾರದು ಎಂಬ ಉದ್ದೇಶದಿಂದ ಜೀವ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಇದು ಸಾಲ ಪಡೆದ ಸದಸ್ಯರ ಕುಟುಂಬ ಮತ್ತು ಬ್ಯಾಂಕ್ ಗಳಿಗೆ ಅನುಕೂಲಕರ ಎನಿಸಿದೆ ಎಂದು ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.