ವಿಧಾತ್  
ಜಿಲ್ಲೆ

ಎಸ್.ಎಂ.ವಿಧಾತ್‌ಗೆ 620 ಅಂಕ

ಬೇಲೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ಎಸ್.ಎಂ.ವಿಧಾತ್ ಒಟ್ಟು 620 ಅಂಕ ಪಡೆದಿದ್ದು ಬೇಲೂರು ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾನೆ.


ಮೊದಲು ಫಲಿತಾಂಶ ಪ್ರಕಟವಾದ ಸಂದರ್ಭ 625 ಅಂಕಗಳಿಗೆ 616 ಅಂಕ ಗಳಿಸಿದ್ದನು. ಗಣಿತ ಹಾಗೂ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಬರಬೇಕೆಂಬ ನಂಬಿಕೆಯಿಂದ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದನು. ಇದೀಗ ಗಣಿತ ಹಾಗೂ ಕನ್ನಡ ಭಾಷೆಯಲ್ಲಿ ತಲಾ 2 ರಂತೆ 4 ಅಂಕಗಳು ಹೆಚ್ಚಾಗಿ ಲಭಿಸಿದ್ದರಿಂದ 620 ಅಂಕ ಪಡೆದಿದ್ದಾನೆ.


ತಾಲೂಕಿನ ಸೋಂಪುರ ಗ್ರಾಮದ ರೈತ ಮಲ್ಲೇಶ್ ರೇಣುಕಾ ದಂಪತಿ ಪುತ್ರ. ಈತನ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ಬಿ.ಎಚ್.ಪ್ರಕಾಶ್, ಮುಖ್ಯ ಶಿಕ್ಷಕ ಎಚ್.ಸಿ.ಗಿರೀಶ್ ಅಭಿನಂದನೆ ಸಲ್ಲಿಸಿದ್ದಾರೆ.


ಇಲ್ಲಿನ ಹೊಯ್ಸಳ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿ ಬಿ.ಎಸ್.ಸೌರವ್ ಮೊದಲ ಫಲಿತಾಂಶದಲ್ಲಿ 625 ಕ್ಕೆ 615 ಅಂಕ ಪಡೆದ್ದನು. ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ 2 ಅಂಕ, ಗಣಿತದಲ್ಲಿ 1 ಅಂಕ ಪಡೆದು ಒಟ್ಟು 618 ಅಂಕ ಗಳಿಸಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.