ತಿಕೋಟಾ: ಭಾರತದಲ್ಲಿ ಸಾರ್ವಜನಿಕ ಗಂಥಾಲಯ ಇಲಾಖೆ ಉನ್ನತ ಸ್ಥಿತಿಗೆ ಬರಲು ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥ ಅವರ ಕಠಿಣ ಪರಿಶ್ರಮವೇ ಕಾರಣವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ರಾಹುಲ್ ನಾಗಣ್ಣವರ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹ- ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರ 131ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಗ್ರಂಥಾಲಯಗಳಿಗೆ ಒಂದು ನಿರ್ದಿಷ್ಟ ರೂಪ ಕೊಟ್ಟರು. ರಂಗನಾಥ ಅವರು ಮೊದಲು ಗಣಿತ ಪ್ರಾಧ್ಯಾಪಕರಾಗಿ, ನಂತರ ಶೈಕ್ಷಣಿಕ ವಿದ್ಯಾಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ತಮ್ಮ ಸೇವೆ ಪ್ರಾರಂಭಿಸಿದರು ಎಂದರು.
ಮಹಾವಿದ್ಯಾಲಯದ ಗ್ರಂಥಾಲಯ ಕಮೀಟಿ ಅಧ್ಯಕ್ಷ ಡಾ. ಬಸವರಾಜ ಸಾಲವಡಗಿ ಮಾತನಾಡಿ, ಗ್ರಂಥಾಲಯಗಳು ನಮ್ಮಲ್ಲಿ ಓದುವ ಆಸಕ್ತಿ ಹೆಚ್ಚಿಸುತ್ತವೆ. ನಮ್ಮ ವ್ಯಕ್ತಿತ್ವ ವಿಕಾಸಕ್ಕೆ ಓದು ಸಹಕಾರಿಯಾಗಿದೆ. ಪುಸ್ತಕ ಮನುಷ್ಯನ ಮಿತ್ರ ಹಾಗೂ ಜ್ಞಾನ ನೀಡುವ ಕಾಮಧೇನು ಆಗಿದೆ. ಒಂದು ಮಂದಿರ ಕಟ್ಟಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂದರು.
ಡಾ. ಎಸ್.ಆರ್. ರಂಗನಾಥ ಅವರ ಭಾವಚಿತ್ರಕ್ಕೆ ಡಾ. ಎಸ್.ಎನ್. ವಾಘಮಾರೆ ಪುಷ್ಪ ಸಮರ್ಪಿಸಿದರು. ಡಾ. ಕೃಷ್ಣಮೂರ್ತಿ ಸಿ.ಎನ್., ಡಾ. ಎಂ.ಬಿ. ಹೂಗಾರ, ಡಾ. ರವಿಚಂದ್ರ ವಾಲಿಕಾರ, ಸುರೇಶ ಉಪ್ಪಾರ, ದೈಹಿಕ ನಿರ್ದೇಶಕರಾದ ಶಿವಮೂರ್ತಿ ಚಿಕ್ಕನರ್ತಿ, ಸಂಜಯ ರಾಠೋಡ, ಗಣೇಶ ಚೌವ್ಹಾಣ, ಜಿ.ಎಂ. ಕಾಂಬಳೆ, ನಾಗೇಶ ನರಳೆ, ಮಂಜುನಾಥ ಕಾಸೆ, ಮಂಜುನಾಥ ಗೂದಳೆ, ಎಲ್.ಬಿ.ದೇಸಾಯಿ, ಗ್ರಂಥಪಾಲಕಿ ಮೊಬಿನಾ ಶೆಟಗಾರ, ಪಿ.ಟಿ. ಸಿಂಧೆ, ಎಸ್.ಎಸ್. ಹಂಜಿ, ವಿ.ಜಿ. ಮಲಕ್ಕನವರ, ಎಂ.ಎಸ್. ವಿಭೂತಿ, ಸಂಗನಗೌಡ ಪಾಟೀಲ, ದಯಾನಂದ ರಶ್ಮಿ, ಪ್ರಕಾಶ ಐಹೊಳೆ, ಅನಿಲ ಪೂಜಾರಿ ಇತರರಿದ್ದರು.