ಕೊಳ್ಳೇಗಾಲ: ಪಟ್ಟಣದ ಪೌರ ಕಾರ್ಮಿಕರ ಕಾಲನಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೆ ಸೇರಿದ 30 ಅಡಿ ಜಾಗವನ್ನು ಬಿಡಬೇಕೆಂಬ ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಮಹೇಶ್ ಮಂಗಳವಾರ ಅಂಬೇಡ್ಕರ್ ಭವನದ ವಸ್ತು ಸ್ಥಿತಿ ವೀಕ್ಷಣೆ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೆ ಸೇರಿದ ಜಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿತ್ತು. ಕೆಲ ತಿಂಗಳನಿಂದ ಈ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಕೆಆರ್‌ಐಡಿಎಲ್ ಅಧಿಕಾರಿಗಳು ಭವನ ಸುತ್ತಲೂ ಗೋಡೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ.
ಈ ನಡುವೆ ಭವನದ ಪೂರ್ವದಲ್ಲಿರುವ ಪೌರ ಕಾರ್ಮಿಕರ ಕಾಲನಿ ನಿವಾಸಿಗಳು ನಮಗೆ 20 ಅಡಿ ರಸ್ತೆ ಬಿಟ್ಟು ಕೊಡುವಂತೆ ಭೀಮನಗರದ ಮುಖಂಡರ ಜತೆ ಮನವಿ ಮಾಡಿದ್ದರು. ಇದಕ್ಕೊಪ್ಪದ ಮುಖಂಡರು 10 ಅಡಿ ಸ್ಥಳವನ್ನು ರಸ್ತೆಗೆ ಬಿಡುತ್ತೇವೆ ಎಂದು ಹೇಳಿದ್ದರು.
ನಂತರ, ಪೌರ ಕಾರ್ಮಿಕರ ನಿವಾಸಿಗಳು ಇತ್ತೀಚೆಗೆ ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಿ, ಸದರಿ ರಸ್ತೆಯಲ್ಲಿ ಸಂಚರಿಸಲು 10 ಅಡಿ ಜಾಗ ಸಾಕಾಗುವುದಿಲ್ಲ. 30 ಅಡಿ ಜಾಗವನ್ನು ಬಿಡಿಸಿಕೊಡಲು ಮನವಿ ಮಾಡಿದ್ದರು. ಸ್ಥಳಪರಿಶೀಲಿಸಿದ ಜಿಲ್ಲಾಧಿಕಾರಿ ನಿವಾಸಿಗಳ ಅನುಕೂಲಕ್ಕಾಗಿ ರಸ್ತೆಗಾಗಿ 30 ಅಡಿ ಬಿಡುವಂತೆ ಆದೇಶಿಸಿದ್ದರು.
ಇದ್ದಕ್ಕೊಪ್ಪದ ಭೀಮನಗರದ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ 30 ಅಡಿ ಜಾಗ ಬಿಟ್ಟುಕೊಡುವ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ಮರು ಪರಿಶೀಲಿಸಿ 15 ಅಡಿಗೆ ಮಿತಿಗೊಳಿಸಬೇಕೆಂದು ಈಗಿನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಅದರಂತೆ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಮಹೇಶ್ ಅವರು ಸಮಾಜ ಕಲ್ಯಾಣ ಇಲಾಖೆ ಹಾಗೂ ಕೆಆರ್‌ಐಡಿಎಲ್‌ನ ಅಧಿಕಾರಿಗಳು, ಭೀಮನಗರದ ಮುಖಂಡರು, ಪೌರಕಾರ್ಮಿಕರ ಕಾಲನಿ ನಿವಾಸಿಗಳ ಸಮ್ಮುಖದಲ್ಲಿ ಸ್ಥಳ ವೀಕ್ಷಣೆ ಮಾಡಿದ್ದಾರೆ.
ಈ ವೇಳೆ ಭೀಮನಗರದ ಮುಖಂಡರು ಹಿಂದಿನ ಜಿಲ್ಲಾಧಿಕಾರಿಗಳು ನಮ್ಮ ಗಮನಕ್ಕೂ ತಾರದೆ 30 ಅಡಿ ರಸ್ತೆಯನ್ನು ಬಿಡುವಂತೆ ಆದೇಶಿಸಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಈ ಆದೇಶದ ವಿರುದ್ಧವಾಗಿ ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಪೌರಕಾರ್ಮಿಕ ಕಾಲನಿಯ ನಿವಾಸಿಗಳು ರಸ್ತೆಯಲ್ಲಿ ಯುಜಿಡಿ ಪೈಪ್‌ಲೈನ್ ಹೋಗಿದೆ. ನಾಳೆ ಸಮಸ್ಯೆ ಬಂದರೆ ದುರಸ್ತಿ ಮಾಡಲು ಹಾಗೂ ವಾಹನ ಸಂಚಾರಕ್ಕೆ 30 ಅಡಿ ರಸ್ತೆ ಬೇಕೇ ಬೇಕು ಎಂದು ಮನವಿ ಮಾಡಿದರು.
ಇದಕ್ಕೊಪ್ಪದ ಭೀಮನಗರ ಮುಖಂಡರು, ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ನ್ಯಾಯ ಕೊಡಿಸುವಂತೆ ಎಸಿ ಅವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಎರಡೂ ಕಡೆಯ ಮುಖಂಡರ ಅಹವಾಲು ಆಲಿಸಿದ ಎಸಿ ಮಹೇಶ್ ಈ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿ ಸ್ಥಳದಿಂದ ತೆರಳಿದರು.
ನಗರಸಭೆ ಪ್ರಭಾರ ಆಯುಕ್ತ ಪ್ರಸನ್ನ, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ನಗರಸಭಾ ಸದಸ್ಯ ಮಂಜುನಾಥ್, ರಾಘವೇಂದ್ರ, ಭೀಮನಗರ ಯಜಮಾನರಾದ ಸಿ.ಬಾಬು, ನಟರಾಜು, ಎಸ್.ಎಲ್. ನಿಂಗರಾಜು, ಸಿದ್ದಾರ್ಥ್, ಕೆ.ಜೆ.ಜವರಪ್ಪ, ಮುಖಂಡ ರಾಜಶೇಖರ್, ಶಿವರಾಳ, ಪೌರ ಕಾರ್ಮಿಕರ ಕಾಲನಿಯ ಮುಖಂಡರಾದ ಜಗನ್ನಾಥ್, ನಾಗರಾಜು, ಎ.ರಮೇಶ್, ಮತ್ತಿತರಿದ್ದರು.