ಕುಂದಗೋಳ: ಪಹಣಿಯಲ್ಲಿ ಹೆಸರು ನೋಂದಾಯಿಸಲು 3000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕಿನ ಬೆನಕನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಗುರಪ್ಪ ಲಮಾಣಿ ಎಂಬುವರನ್ನು ಎಸಿಬಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಇಸ್ಮಾಯಿಲ್ ಎಂಬುವರು ಬೆನಕನಹಳ್ಳಿ ಗ್ರಾಮದಲ್ಲಿ 3 ಎಕರೆ 19 ಗುಂಟೆ ಜಮೀನು ಹೊಂದಿದ್ದು, ನ್ಯಾಯಾಲಯದ ಆದೇಶದ ಪ್ರಕಾರ ತಮ್ಮ ಹಾಗೂ ದೊಡ್ಡಪ್ಪನ ಮಕ್ಕಳ ಹೆಸರಿನಲ್ಲಿ ವಾಟ್ನಿ ಮಾಡಿಸಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಪಹಣಿಯಲ್ಲಿ ಹೆಸರು ದಾಖಲಿಸುವ ಕುರಿತು ಗ್ರಾಮಲೆಕ್ಕಾಧಿಕಾರಿ ಸಂರ್ಪಸಿದಾಗ, ಸರ್ಕಾರಿ ಶುಲ್ಕ 1750 ರೂ. ಹಾಗೂ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಇಸ್ಮಾಯಿಲ್ ಬುಧವಾರ ಧಾರವಾಡದ ಎಸಿಬಿಗೆ ದೂರು ನೀಡಿದ್ದರು. ಡಿಎಸ್ಪಿ ವಿಜಯಕುಮಾರ ಬಿಸನಳ್ಳಿ ಅವರ ತಂಡ ಬುಧವಾರ ಗ್ರಾಮಲೆಕ್ಕಾಧಿಕಾರಿ ಹಣ ಪಡೆಯುತ್ತಿದ್ದಾಗ ಬಂಧಿಸಿದ್ದಾರೆ. ಅಧಿಕಾರಿಗಳಾದ ಬಿ.ಎ. ಜಾಧವ್, ಮಂಜುನಾಥ ಹಿರೇಮಠ, ಜಯಲಕ್ಷ್ಮೀ ಕಟ್ಟಿ, ಶ್ರೀಶೈಲ ಕಾಜಗಾರ, ಗಿರೀಶ ಮನಸೂರ, ಲೋಕೇಶ ಬೆಂಡಿಕಾಯಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ಎಸ್. ವೀರೇಶ, ಶಂಕರ ನರಗುಂದ, ಗಣೇಶ ಶಿರಹಟ್ಟಿ ದಾಳಿಯಲ್ಲಿ ಪಾಲ್ಗೊಂಡಿದ್ದರು.