ಗದಗ: ಸಬ್ಸಿಡಿ ಹಣ ಬಿಡುಗಡೆ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ ಹಣ ಪಡೆಯುವ ಸಂದರ್ಭದಲ್ಲಿ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನರಗುಂದ ಪಟ್ಟಣದ ನಿವಾಸಿ ಫಾರೂಖ್ಅಹ್ಮದ್ ಬಿದರಕುಂದಿ ಎಂಬುವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದ ಜಾಕೀರ್ ಹುಸೇನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
2018-19ನೇ ಸಾಲಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸಬ್ಸಿಡಿ ಪಡೆದು ಟ್ಯಾಕ್ಸಿ ಖರೀದಿಸುವ ಸಲುವಾಗಿ ಆನ್ಲೈನ್ ಮೂಲಕ ಫಾರೂಖ್ಅಹ್ಮದ್ ಬಿದರಕುಂದಿ ಅವರು ಅರ್ಜಿ ಸಲ್ಲಿಸಿದ್ದರು. ಕಾನೂನು ಪ್ರಕಾರ ಅರ್ಹತೆ ಹೊಂದಿರುವ ಫಾರೂಖ್ಅಹ್ಮದ್ ಬಿದರಕುಂದಿ ಅವರಿಗೆ 3 ಲಕ್ಷ ರೂ. ಸಬ್ಸಿಡಿ ಹಣ ಮಂಜೂರಾಗಿತ್ತು. ಈ ಹಣವನ್ನು ನೀಡಲು ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಸತಾಯಿಸುತ್ತಿದ್ದರು. ಈ ಕುರಿತು ಎರಡು ಸಲ ಕಚೇರಿಗೆ ಬಂದರೂ ಪ್ರಯೋಜನ ಆಗಿರಲಿಲ್ಲ. ಜಿಲ್ಲಾ ವ್ಯವಸ್ಥಾಪಕರು ಕಚೇರಿಯ ಕಂಪ್ಯೂಟರ್ ಆಪರೇಟರ್ ಅಕ್ಬರ್ ಎಂಬುವರ ಮೂಲಕ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದಾಳಿಯಲ್ಲಿ ಗದಗ ಎಸಿಬಿ ಡಿಎಸ್ಪಿ ವಾಸುದೇವ ರಾಮ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ವೈ.ಎಸ್. ಧರಣಾನಾಯ್ಕ, ವಿಶ್ವನಾಥ.ಎಚ್, ಮತ್ತು ಸಿಬ್ಬಂದಿಗಳಾದ ಬಿ.ಬಿ.ಜಕ್ಕಣ್ಣವರ. ಎಂ.ಎಂ. ಅಯ್ಯನಗೌಡರ, ಆರ್.ಎಚ್. ಹೆಬಸೂರ, ಎಸ್.ಟಿ. ಅಣ್ಣಿಗೇರಿ, ಎಂ.ಎನ್. ಕರಿಗಾರ, ಎನ್.ಎಸ್. ತಾಯಣ್ಣವರ, ಈರಣ್ಣ ಜಾಲಿಹಾಳ, ವೀರೇಶ ಜೋಳದ, ತಾರಪ್ಪ ಪಾಲ್ಗೊಂಡಿದ್ದರು.
EndFragment