ಜಿಲ್ಲೆ

ಎಸಿ ಕಚೇರಿಗೆ ರೈತರ ಮುತ್ತಿಗೆ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಆಗ್ರಹ, ಶಾಸಕರಿಂದ ರೈತರ ಮನವೊಲಿಕೆ ಯತ್ನ

Bengaluru Rural

ದೊಡ್ಡಬಳ್ಳಾಪುರ: ರಾಗಿ ನೋಂದಣಿ ಅವಧಿ ವಿಸ್ತರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಮಾತು ತಪ್ಪಿದ್ದಾರೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ನೋಂದಣಿ ಆರಂಭಿಸುವಂತೆ ಆಗ್ರಹಿಸಿ ಬುಧವಾರ ರೈತರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು ಈ ವೇಳೆ ಮಾತನಾಡಿದ ಬಚ್ಚಹಳ್ಳಿ ಸತೀಶ್ ಸರ್ಕಾರ ನುಡಿದಂತೆ ನಡೆಯದೆ ಮಾತು ತಪ್ಪಿದೆ ಎಂದು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಶಾಸಕರನ್ನು ತರಾಟೆಗೆ ತೆಗೆದುಕೊಂಡ ರೈತರು ಧಿಕ್ಕಾರ ಕೂಗಿದರು. ಇದರಿಂದ ಕೆಲ ಸಮಯ ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೌನವಹಿಸುವಂತಾಗಿತ್ತು.

ಸರ್ಕಾರದ ವಿರುದ್ಧ ಶಾಸಕ ಗರಂ: ರೈತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ ಶಾಸಕ ಟಿ.ವೆಂಕಟರಮಣಯ್ಯ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ರೈತರು, ಬಡವರು ಹಾಗೂ ಕಾರ್ಮಿಕ ವಿರೋಧಿ ಯಾಗಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದರು. ರೈತರನ್ನು ಸುಳ್ಳು ಭರವಸೆಗಳ ಮೂಲಕ ವಂಚಿಸಲಾಗುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳ ರೈತರು ಬೆಳೆದಿರುವ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸೂಚನೆಯಂತೆ ರೈತರಿಂದ 20 ಕ್ವಿಂಟಾಲ್ ರಾಗಿ ಮಾತ್ರ ಖರೀದಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಹೆಚ್ಚಿನ ರಾಗಿ ಖರೀದಿಸಲಾಗುವುದು ಎಂದು ಮುಖ್ಯಮಂತ್ರಿಗಳು ವಿಧಾನ ಸೌಧದಲ್ಲೇ ಅಸಾಹಯಕತೆ ಒಪ್ಪಿಕೊಂಡಿದ್ದಾರೆ ಎಂದರು. ಸಾಲ ಮಾಡಿ, ಮಳೆಯಲ್ಲಿ ಬೆಳೆ ಹಾಳುಮಾಡಿಕೊಂಡು ಕನಿಷ್ಠ ಪ್ರಮಾಣದಲ್ಲಿ ರಾಗಿ ಬೆಳೆದಿರುವ ರೈತರ ಪಾಡು ನರಕಮಯವಾಗಿದೆ. ರಾಗಿ ಖರೀದಿ ಮಾಡುವಲ್ಲಿ ಅಧಿಕಾರಿಗಳು ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ದೂರು ಸರ್ಕಾರದ ವಿರುದ್ಧ್ದವೇ ಹೊರತು ಅಧಿಕಾರಿಗಳ ವಿರುದ್ಧ ಅಲ್ಲ ಎಂದರು.

ರಾಗಿ ಖರೀದಿಸುವಲ್ಲಿ ಸರ್ಕಾರದ ಧೋರಣೆ ವಿರುದ್ಧ ಸಿಡಿದ್ದೆರುವ ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು ಬಂದು ರಾತ್ರಿ ಹಗಲು ನಿರಂತರವಾಗಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಸರ್ಕಾರ ತಕ್ಷಣ ಸೂಕ್ತ ಪರಿಹಾರಕಂಡುಕೊಂಡು ರೈತರ ರಾಗಿ ಖರೀದಿಗೆ ಒಪ್ಪಿಗೆ ಸೂಚಿಸಬೇಕು. ಇಲ್ಲವಾದರೆ ರೈತರೊಂದಿಗೆ ನಾನೂ ಧರಣಿಯಲ್ಲಿ ಭಾಗವಹಿಸುತ್ತೇನೆ. ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು ವಿಧಾನ ಸೌಧಕ್ಕೂ ಹೋಗುತ್ತೇವೆ ಎಂದರು.

ನಿರೀಕ್ಷೆ ಇದೆ: ರಾಗಿ ಖರೀದಿಯಲ್ಲಿನ ಸಮಸ್ಯೆಗಳ ಕುರಿತು ರೈತರಿಗೆ ಮಾಹಿತಿ ನೀಡಿದ ತಹಸೀಲ್ದಾರ್ ಮೋಹನಕುಮಾರಿ, ಈಗಾಗಲೇ ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ರಾಗಿ ಖರೀದಿ ಕುರಿತಂತೆ ಸೂಕ್ತ ನಿರ್ದೇಶನ ಬರುವ ನಿರೀಕ್ಷೆ ಇದೆ ಎಂದರು.