ಗುಂಡ್ಲುಪೇಟೆ : ತಾಲೂಕಿನ ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮತ್ತು ಸಬ್ಸಿಡಿ ಹಣವನ್ನು ಬಿಡುಗಡೆ ಮಾಡುವಂತೆ ಮುಖಂಡರು ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ತಹಸೀಲ್ದಾರ್ ಟಿ. ರಮೇಶ್‌ಬಾಬು ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ ವಿವಿಧ ನಿಗಮದ ಫಲಾನುಭವಿಗಳ ಆಯ್ಕೆಪಟ್ಟಿಯ ವಿವರಗಳನ್ನು ಸಭೆಗೆ ನೀಡದ ಜಿಲ್ಲಾ ಲೀಡ್ ಬ್ಯಾಂಕಿನ ಅಧಿಕಾರಿಯನ್ನು ಮುಖಂಡರು ತೀವ್ರವಾಗಿ ತರಾಟೆ ತೆಗೆದುಕೊಂಡರು.
ಬ್ಯಾಂಕಿನವರು ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಜನರಿಗೆ ಸಾಲ ನೀಡುತ್ತಿಲ್ಲ. ನಾನಾ ಕಾರಣ ನೀಡಿ ಸಾಲ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡದೆ ಸತಾಯಿಸುತಿದ್ದಾರೆ ಬ್ಯಾಂಕಿನ ಸಿಬ್ಬಂದಿ ಅನ್ಯರಾಜ್ಯದವರಾಗಿದ್ದು ಸ್ಥಳೀಯ ಜನರ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಬ್ಯಾಂಕುಗಳಿಗೆ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದ್ದು, ವೈದ್ಯರು ಮತ್ತು ಶವಪರೀಕ್ಷೆ ನಡೆಸುವ ಸಿಬ್ಬಂದಿ ಅಸಡ್ಡೆ ತೋರುತ್ತಾರೆ ಎಂದು ಮುಖಂಡರು ದೂರಿದರು. ಇದಕ್ಕೆ ಉತ್ತರಿಸಿದ ಡಾ.ಮಂಜುನಾಥ್ ಮುಂದಿನ ದಿನಗಳಲ್ಲಿ ಪೊಲೀಸ್ ವರದಿ ಬರುತ್ತಿದ್ದಂತೆ ಶವ ಪರೀಕ್ಷೆ ಶೀಘ್ರವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಗೈರಾದ ಸಮಿತಿಯ ಸದಸ್ಯರು: ಪರಿಶಿಷ್ಟ ಜಾತಿ ಮತ್ತು ವರ್ಗದ ಸದಸ್ಯ ಶ್ರೀನಿವಾಸ್ ಸೇರಿದಂತೆ ಸಮಿತಿಯ ಸದಸ್ಯರು, ಅಂಬೇಡ್ಕರ್ ನಿಗಮದ ಅಧಿಕಾರಿ ಮತ್ತು ಅರಣ್ಯ ಇಲಾಖೆಯವರು ಸಭೆಗೆ ಗೈರಾಗಿದ್ದಕ್ಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸೌಜನ್ಯದಿಂದ ವರ್ತಿಸುವಂತೆ ತಹಸೀಲ್ದಾರ್ ರಮೇಶ್‌ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ತಾಲೂಕು ಸಮಾಜ ಕಲ್ಯಾಣ ನಿರ್ದೇಶಕ ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಆರ್.ಚಂದ್ರಪ್ಪ, ಈಶ್ವರ್ ಇದ್ದರು.