ಹಾಸನ: ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಹಳ್ಳಿಗಾಡಿನ ಆಟೋಟಗಳಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಭಾಗವಹಿಸಿ ಸಂಭ್ರಮಿಸಿದರು.
ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಆರ್.ಟಿ. ಪ್ರತಿಮಾದೇವಿ ಅವರು ಬಲೂನ್ ಹಾರಿ ಬಿಡುವ ಮೂಲಕ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಕ್ರೀಡಾ ವೈಭವ ನಮ್ಮೂರ ಆಟ ನಮ್ಮೆಲ್ಲರ ಹೆಮ್ಮೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಎವಿಕೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯ ಓದಿನ ಕಡೆಗೆ ಗಮನ ಕೊಡುತ್ತಿದ್ದ ವಿದ್ಯಾರ್ಥಿನಿಯರು ಈ ಒಂದು ದಿವಸ ಕ್ರೀಡೆಗಾಗಿ ಮೀಸಲಿಟ್ಟು, ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಭಾಗದ ಹತ್ತು ಕ್ರೀಡೆಯನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಗೋಣಿ ಚೀಲದ ಓಟ, ನಿಂಬೆಹಣ್ಣಿನ ಓಟ, ಮೂರು ಕಾಲಿನ ಓಟ, ಮಡಿಕೆ ಒಡೆಯುವ ಆಟ, ಹುಲಿ ಬಂತು ಹುಲಿ, ಕೆರೆ-ದಡ, ನಾಯಿ ಮೂಳೆ, ಹಗ್ಗ- ಜಗ್ಗಾಟ, ರಂಗೋಲಿ ಸ್ಪರ್ಧೆ ಸೇರಿದಂತೆ ಹತ್ತು ಹಲವಾರು ಆಟಗಳನ್ನು ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದೇವೆ. ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ಹೇಳಿದರು.
ಹಿಂದಿನ ತಲೆಮಾರಿನ ಸಂಸ್ಕೃತಿ ಇಂದು ನಶಿಸಿ ಹೋಗುತ್ತಿದೆ. ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಗೇಮಿಂಗ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ನಮ್ಮ ಸಂಸ್ಕೃತಿಯ ಭಾಗವಾದ ಈ ಕ್ರೀಡೆಗಳನ್ನು ಆಚರಿಸುವ ಮೂಲಕ ಉಳಿಸಿ ಬೆಳೆಸಬೇಕಿದೆ. ಈ ಗ್ರಾಮೀಣ ಕ್ರೀಡೆಗಳು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಎವಿಕೆ ಕಾಲೇಜು ಕನ್ನಡ ಉಪನ್ಯಾಸಕರಾದ ಡಾ. ಸೀ.ಚ. ಯತೀಶ್ವರ್, ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾಲತಾ, ಶಿಕ್ಷಕರಾದ ಎಸ್.ಆರ್. ಹೇಮಾವತಿ, ಸುಚಿತ್ರಾ, ಶೋಭಾ, ಶೈಲಜಾ, ಆಶಾ, ಭಾವನಾ, ಮಹಾಲಕ್ಷ್ಮೀ, ಸುನಿಧಿ, ಡಾ. ಮಂಜುಳಾ, ಶೀತಲ್, ಜಯಶ್ರೀ ಇತರರು ಪಾಲ್ಗೊಂಡಿದ್ದರು.