ಕೊಪ್ಪ: ವಿಮಾ ಪಾಲಿಸಿದಾರರಿಗೆ ಬೋನಸ್ ಹೆಚ್ಚಳ ಮಾಡಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಬೇಕು. ವಿಮಾ ಪ್ರತಿನಿಧಿಗಳಿಗೆ ಅಧಿಕ ಕಮಿಷನ್, ಪ್ರತಿನಿಧಿಗಳಿಗೆ ಕ್ಷೇಮನಿಧಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಲ್ಐಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಒತ್ತಾಯಿಸಿದರು. ಪಟ್ಟಣದ ಎಲ್ಐಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಎಲ್ಐಸಿ ಆಡಳಿತ ಮಂಡಳಿ ಮನವಿ ತಿರಸ್ಕರಿಸಿದೆ. ಆದ್ದರಿಂದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆಡಳಿತ ಮಂಡಳಿ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿ ಶುಕ್ರವಾರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.