ಜಿಲ್ಲೆ

ಎಲ್​ಎಲ್​ಆರ್, ಡಿಎಲ್ ನೀಡಿಕೆ ತಾತ್ಕಾಲಿಕ ಸ್ಥಗಿತ

Dharwad

ಹುಬ್ಬಳ್ಳಿ: ಕರೊನಾ ಸೋಂಕು ಹರಡುವಿಕೆ ಹಾಗೂ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಗಬ್ಬೂರ ಕ್ರಾಸ್​ನಲ್ಲಿರುವ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಾ. 20ರಿಂದ ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್​ಎಲ್​ಆರ್) ಹಾಗೂ ಚಾಲನಾ ಅನುಜ್ಞಾ ಪತ್ರ (ಡಿಎಲ್)ಗಳ ಪರೀಕ್ಷೆಗಳಿಗೆ ಹಾಜರಾಗುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

ಏಪ್ರಿಲ್ 15ರ ವರೆಗೆ ಮಾತ್ರ ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್​ಎಲ್​ಆರ್) ಸಿಂಧುತ್ವ ಹೊಂದಿರುವವರು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅವರಿಗೆ ನೀಡಿದ ನಿಗದಿತ ದಿನದ ಸ್ಲಾಟ್​ನಂದು ಹಾಜರಾಗಬಹುದು.

ಹೆಚ್ಚಿನ ವಿವರಗಳಿಗೆ ಸಾರ್ವಜನಿಕರು ಕಚೇರಿಗೆ ಆಗಮಿಸದೆ 0836-2244550 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈದ್ರಾಬಾದ್ ವಿಮಾನ ರದ್ದು: ಕರೊನಾ ಭೀತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಹೈದ್ರಾಬಾದ್ ವಿಮಾನ ಹಾರಾಟ ರದ್ದು ಪಡಿಸಲಾಗಿದೆ. ಮಾ. 20ರಿಂದ ಒಂದು ವಾರದವರೆಗೆ ಈ ವಿಮಾನ ಹಾರಾಟ ಇರುವುದಿಲ್ಲ. ಅಲೈಯನ್ಸ್ ಏರ್​ಲೈನ್ಸ್​ನ ವಿಮಾನ ಹೈದ್ರಾಬಾದ್​ನಿಂದ ಬೆಳಗ್ಗೆ 7.55ಕ್ಕೆ ಹುಬ್ಬಳ್ಳಿಗೆ ಬರುತ್ತಿತ್ತು.

ಕಡ್ಡಾಯ ತಪಾಸಣೆ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸಿಬ್ಬಂದಿ ಕರೊನಾ ಬಗ್ಗೆ ಈವರೆಗೆ ಜನರಿಗೆ ಕೇವಲ ತಿಳಿವಳಿಕೆ ನೀಡುತ್ತಿದ್ದರು. ಜ್ವರ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಇನ್ನು ಮೇಲೆ ಎಲ್ಲ ಪ್ರಯಾಣಿಕರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು ಎಂದು ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕ್ರೆ ತಿಳಿಸಿದ್ದಾರೆ.

ನ್ಯಾಯಾಲಯ ಪ್ರವೇಶ ಸ್ಥಗಿತ

ಕರೊನಾ ಭೀತಿ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಜನ ಸೇರುವುದನ್ನು ತಪ್ಪಿಸಬೇಕೆಂದು ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಹುಬ್ಬಳ್ಳಿ ನ್ಯಾಯಾಲಯಕ್ಕೆ ನಿತ್ಯ ನೂರಾರು ಜನರು, ಕಕ್ಷಿದಾರರು ಬರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನ್ಯಾಯಾಲಯಕ್ಕೆ ಹೆಚ್ಚಿನ ಜನರು ಪ್ರವೇಶ ಮಾಡಬಾರದು. ಕಕ್ಷಿದಾರರು ತಮ್ಮ ವಕೀಲರಿಗೆ ಮಾಹಿತಿ ನೀಡಬೇಕು. ಅಗತ್ಯ ಇದ್ದರೆ ಮಾತ್ರ ಕೋರ್ಟ್​ಗೆ ಬರಬೇಕು. ಅನಗತ್ಯವಾಗಿ ಕೋರ್ಟ್ ಆವರಣದಲ್ಲಿ ಜನರು ಸೇರಬಾರದು. ಸಾರ್ವಜನಿಕರು, ಕಕ್ಷಿದಾರರು ಸಹಕರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಮನವಿ ಮಾಡಿದ್ದಾರೆ.