ಚಿಕ್ಕಬಳ್ಳಾಪುರ: ನಗರಸಭೆ ಬಿಗಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಊರಿನ ಅಂದ ಕೆಡಿಸುವ ರೀತಿಯಲ್ಲಿ ಪ್ರಚಾರದ ಪೋಸ್ಟರ್‌ಗಳನ್ನು ಎಲ್ಲೆಂದರಲ್ಲಿ ಅಂಟಿಸಲಾಗುತ್ತಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಗೋಡೆ, ಜಿಪಂ ತಾಂತ್ರಿಕ ವಿಭಾಗ ಕಚೇರಿ, ಹಳೇ ಬಸ್ ನಿಲ್ದಾಣ, ನಗರಸಭೆ ಕಚೇರಿ, ಜೂನಿಯರ್ ಕಾಲೇಜು ಸೇರಿ ಹಲವೆಡೆ ಭಿತ್ತಿ ಪತ್ರಗಳದ್ದೇ ಕಾರುಬಾರು.
ಯಾವುದೇ ಪ್ರಚಾರ ಕಾರ್ಯಕ್ರಮಗಳು, ಸಭೆ ಸಮಾರಂಭಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಹಿಂದೆ ಮುಂದೆ ಯೋಚಿಸದೆ ರಾತ್ರೋರಾತ್ರಿ ಕರಪತ್ರಗಳನ್ನು ಗೋಡೆಗಳ ಮೇಲೆ ಅಂಟಿಸಲಾಗುತ್ತಿದೆ. ದ್ವಿಪಥದ ರಸ್ತೆ ವಿಭಜಕಗಳು, ಸರ್ಕಾರಿ ಕಚೇರಿಗಳ ಗೋಡೆಗಳನ್ನೂ ಬಿಡುತ್ತಿಲ್ಲ.
ಸಮಾಜ ಸೇವಕರು, ರಾಜಕೀಯ ಮುಖಂಡರು, ಚಿತ್ರಮಂದಿರದ ಮಾಲೀಕರು ಹೆಚ್ಚಿನ ಪ್ರಚಾರ ಅಪೇಕ್ಷಿಸಿ ಜನಸಂದಣಿ ಹೆಚ್ಚಿಗೆ ಇರುವ ಮತ್ತು ಸುಲಭವಾಗಿ ಕಣ್ಣಿಗೆ ಬೀಳುವ ಪ್ರದೇಶಗಳಲ್ಲಿ ಪೋಸ್ಟರ್‌ಗಳನ್ನು ಹುಡುಗರಿಗೆ ಅಂಟಿಸಲು ಸೂಚಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಕೆಲಸವನ್ನು ರಾತ್ರಿ 11 ಗಂಟೆ ಸಮಯದಲ್ಲಿ ಕೈಗೊಳ್ಳುತ್ತಿರುವುದರಿಂದ ಇದನ್ನು ತಡೆಯಲು ಆಗುತ್ತಿಲ್ಲ.
ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾರ್ಥಿನಿಲಯ, ಕಚೇರಿಗಳ ಕಾಂಪೌಂಡ್ ಗೋಡೆಯ ಮೇಲೆ ಪೋಕರಿಗಳು ಹರಟೆ ಹೊಡೆಯುತ್ತಾ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದರಿಂದ ಸ್ವಯಂ ಸೇವಾ ಸಂಸ್ಥೆಯು ಸ್ವಚ್ಛತೆ ಕೈಗೊಂಡು ಗೋಡೆ ಹಾಳಾಗದಿರಲು ಒಳ್ಳೆಯ ಸಂದೇಶಾತ್ಮಕ ಆಕರ್ಷಕ ಚಿತ್ರಗಳನ್ನು ಬಿಡಿಸಿತ್ತು. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಹಲವರು ಪ್ರೇರಣೆಗೊಂಡು ನಗರದ ವಿವಿಧೆಡೆ ಅಂಟಿಸಿದ್ದ ಚೀಟಿಗಳನ್ನು ತೆಗೆದು ಹಾಕಿತ್ತು. ಬಣ್ಣ ಬಳಿದಿದ್ದವು. ಆದರೆ, ಈಗ ಇವೆಲ್ಲವೂ ಹಾಳಾಗುತ್ತಿವೆ.
ವಾರ್ಡ್ ನಾಮಲಕವನ್ನೂ ಬಿಡುತ್ತಿಲ್ಲ: ಇತ್ತೀಚೆಗೆ ನಗರಸಭೆಯಿಂದ ಸ್ವಚ್ಛ ಭಾರತ ಅಭಿಯಾನದಡಿ ಸರ್ಕಾರಿ ಕಚೇರಿ ಕಾಂಪೌಂಡ್ ಗೋಡೆಗಳ ಮೇಲೆ ನೀರಿನ ಉಳಿತಾಯ, ಕಸ ವಿಲೇವಾರಿ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರಗಳನ್ನು ಕಲಾವಿದರು ಬಿಡಿಸಿದ್ದರು. ಇದರ ಮೇಲೆ ಕರಪತ್ರ ಮತ್ತು ಭಿತ್ತಿ ಚೀಟಿಗಳನ್ನು ಅಂಟಿಸಲಾಗುತ್ತಿದೆ. ಈ ಬಗ್ಗೆ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿ, ನಗರಸಭೆಗೆ ದೂರು ನೀಡುತ್ತಿದ್ದಾರೆ. ಆದರೂ ತೆರವುಗೊಳಿಸುವ ಕಾರ್ಯವಾಗಿಲ್ಲ. ಮತ್ತೆ ಬಿಗಿ ಕ್ರಮಕ್ಕೆ ಮುಂದಾಗುತ್ತಿಲ್ಲ.
್ಲೆಕ್ಸ್, ಬ್ಯಾನರ್ ಸಮಸ್ಯೆ: ಹಿಂದೆ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಗೆ ಕಡಿವಾಣ ಹಾಕಲಾಗಿತ್ತು. ಆದರೆ, ನಗರದ ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಫ್ಲೆಕ್ಸ್ ಬ್ಯಾನರ್‌ಗಳು ರಾರಾಜಿಸುತ್ತಿರುತ್ತವೆ. ಜನಪ್ರತಿನಿಧಿಗಳು, ರಾಜಕೀಯ ನಾಯಕರು, ಪ್ರಭಾವಿಗಳು ಹುಟ್ಟು ಹಬ್ಬ, ವಿಶೇಷ ಕಾರ್ಯಕ್ರಮಗಳ ಪ್ರಚಾರಕ್ಕೆ ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ. ಎಲ್ಲೂ ಪ್ರಚಾರಪ್ರಿಯರು ನಿಯಮ ಪಾಲಿಸುತ್ತಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಜಿಲ್ಲಾ ಕೇಂದ್ರವನ್ನು ಸುಂದರ ನಗರವನ್ನಾಗಿಸುವ ಘೋಷಣೆ ಮಾಡಲಾಗುತ್ತಿದೆ. ಆದರೆ, ಅಸಹ್ಯ ಮೂಡಿಸುವ ರೀತಿಯಲ್ಲಿ ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಪೋಸ್ಟರ್ ಅಳವಡಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಎನ್.ಚಂದ್ರಶೇಖರ್, ಉಪನ್ಯಾಸಕ, ಚಿಕ್ಕಬಳ್ಳಾಪುರ ******** ಇತ್ತೀಚೆಗೆ ಕಚೇರಿಯ ಕಾಂಪೌಂಡ್ ಗೋಡೆ ಮೇಲೆ ಸ್ವಚ್ಛ ಭಾರತ್ ಅಭಿಯಾನ ಜಾಗೃತಿಯ ಚಿತ್ರಗಳನ್ನು ಬರೆಸಲಾಗಿತ್ತು. ರಾತ್ರೋ ರಾತ್ರಿ ಬಂದು ಯಾರೋ ಪೋಸ್ಟರ್ ಅಂಟಿಸಿ ಹೋಗಿದ್ದಾರೆ. ಇದರಲ್ಲಿನ ಮಾಹಿತಿ ಆಧರಿಸಿ ಪ್ರಶ್ನಿಸಿದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ಉತ್ತರ ಬಂತು. ಹೆಸರು ಹೇಳಲು ಇಚ್ಛಿಸದ ಅಧಿಕಾರಿ, ಅರಣ್ಯ ಇಲಾಖೆ **** ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಗರದ ಸೌಂದರ್ಯ ಹಾಳಾಗುತ್ತದೆ. ಟಿ.ಎಸ್.ನಾಗೇಂದ್ರ ಬಾಬು, ಸಾಹಿತಿ, ಚಿಕ್ಕಬಳ್ಳಾಪುರ