ಬೇಲೂರಿನ ಮೀನು ಮಾರುಕಟ್ಟೆ ಸಮೀಪ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಎಚ್ಚರಿಕೆ ನಾಮಫಲಕ ಅಳವಡಿಸಿದರು.  
ಜಿಲ್ಲೆ

ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡದೊಂದಿಗೆ ಕಠಿಣ ಕ್ರಮ

ಬೇಲೂರು: ಪ್ರವಾಸಿ ತಾಣ ಬೇಲೂರು ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಕೆಲವರು ಎಲ್ಲೆಂದರಲ್ಲಿ ಕಸ ಹಾಕುವ ಮೂಲಕ ಪುರಸಭೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಹೀಗಾಗಿ ಅಂತವರಿಗೆ ಮುಂದಿನ ದಿನಗಳಲ್ಲಿ 5 ಸಾವಿರ ರೂ. ದಂಡದೊಂದಿಗೆ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.

ಪಟ್ಟಣದ ಮೀನು ಮಾರುಕಟ್ಟೆ ಬಳಿ ಎಲ್ಲೆಂದರಲ್ಲಿ ಕಸ ಹಾಕದಂತೆ ಪುರಸಭೆಯಿಂದ ಎಚ್ಚರಿಕೆ ನಾಮಫಲಕ ಅಳವಡಿಸಿ ಮಾತನಾಡಿದ ಅವರು, ಬೇಲೂರು ವಿಶ್ವವಿಖ್ಯಾತ ಪ್ರವಾಸಿ ತಾಣ, ನಿತ್ಯ ಸಾವಿರಾರು ಪ್ರವಾಸಿಗರು ದೇಶ-ವಿದೇಶಗಳಿಂದ ಬಂದು ಹೋಗುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ದೇಗುಲ ವೀಕ್ಷಣೆ ನಂತರ ಪಟ್ಟಣ ವೀಕ್ಷಿಸಲು ಹೋದ ಸಂದರ್ಭ ನಗರ ಸ್ವಚ್ಛವಾಗಿರಬೇಕೆಂಬ ನಿಟ್ಟಿನಲ್ಲಿ 23 ವಾರ್ಡ್‌ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸುವುದರ ಜತೆಗೆ ಆಟೋ ಟಿಪ್ಪರ್‌ನಲ್ಲಿ ಮನೆ ಬಳಿ ಬಂದು ಕಸ ಸಂಗ್ರಹಿಸಿ ಹೊರವಲಯದಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ಹಾಕುತ್ತಾರೆ. ಆ ಬಳಿಕ ಅಲ್ಲಿ ಒಣ ಮತ್ತು ಹಸಿ ಕಸ ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದಾಗಿ ಪುರಸಭೆಗೆ ಉತ್ತಮ ಹೆಸರು ಬಂದಿದೆ ಎಂದರು.

ಪುರಸಭೆ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುತಿದ್ದರೂ ಕೆಲವರು ರಾತ್ರೋರಾತ್ರಿ ಮೂಟೆಗಳಲ್ಲಿ ಕಸ ಹಾಗೂ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆಯುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕಲಾಗುವುದು ಎಂದ ಅವರು, ಪಟ್ಟಣದ ವಿವಿಧೆಡೆ ನಾಮಫಲಕ ಅಳವಡಿಸುವುದರೊಂದಿಗೆ ಸಿಸಿ ಕ್ಯಾಮರಾಗಳನ್ನೂ ಹಾಕಲಾಗಿದೆ. ಅಲ್ಲದೆ ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ಹೆಸರನ್ನು ಪುರಸಭೆಗೆ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿ ಇಟ್ಟು ಸೂಕ್ತ ಬಹುಮಾನ ನೀಡಲಾಗುತ್ತದೆ. ಜತೆಗೆ ಕೋಳಿ ಮಾಂಸದ ಅಂಗಡಿ, ಬೇಕರಿ ಸೇರಿದಂತೆ ಇತರ ಅಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದು ತಿಳಿದರೆ ಅವರ ಅನುಮತಿ ರದ್ದು ಮಾಡಲಾಗುದು ಎಂದು ಎಚ್ಚರಿಸಿದರು.

ಪುರಸಭಾ ಸದಸ್ಯರಾದ ಅಕ್ರಂ ಪಾಷ, ಸೌಮ್ಯ, ಆರೋಗ್ಯ ನಿರೀಕ್ಷರಾದ ಜ್ಯೋತಿ ಇತರರಿದ್ದರು.