ಜಿಲ್ಲೆ

ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ದಂಡ

Haveri

ಬ್ಯಾಡಗಿ: ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಕಸವನ್ನು ಪೌರ ಕಾರ್ವಿುಕರ ಕಸದ ಗಾಡಿಯಲ್ಲೇ ಹಾಕಬೇಕು. ರಸ್ತೆ ಮಗ್ಗುಲಲ್ಲಿ ಚೆಲ್ಲಿದರೆ ದಂಡ ವಸೂಲಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಪುರಸಭೆ ಕಾರ್ಯಾಲಯ ಹಾಗೂ ಮುಖ್ಯ ರಸ್ತೆಗಳ ಬಳಿ ಪೌರ ಕಾರ್ವಿುಕರು ಹಾಗೂ ಸಿಬ್ಬಂದಿ ಶನಿವಾರ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯರಸ್ತೆ, ವೃತ್ತ, ಡಿವೈಡರ್, ಕಚೇರಿ ಸುತ್ತಮುತ್ತ ಹಾಗೂ ಎಸ್​ಜೆಜೆಎಂ ತಾಲೂಕು ಕ್ರೀಡಾಂಗಣ ಸೇರಿದಂತೆ ಹಲವೆಡೆ ಸ್ವಚ್ಛತಾ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅ. 8ರವರೆಗೆ ಪ್ರತಿದಿನ ಬೆಳಗ್ಗೆ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಅರಿಯಲಾಗುತ್ತದೆ ಎಂದರು. ಪುರಸಭೆ ವ್ಯಾಪ್ತಿಯಲ್ಲಿ ಕಸವನ್ನು ರಸ್ತೆ ಹಾಗೂ ಹಾಳುಬಿದ್ದ ಜಾಗದಲ್ಲಿ ಹಾಕದಂತೆ ನಾಗರಿಕರಿಗೆ ಧ್ವನಿವರ್ಧಕ ಮೂಲಕ ಎರಡು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದೇವೆ. 23 ವಾರ್ಡ್​ಗಳಲ್ಲಿ ಬೆಳಗ್ಗೆ ಕಾರ್ವಿುಕರ ತಂಡ ವಾಹನಗಳ ಮೂಲಕ ತೆರಳಿ, ಎಲ್ಲ ಕಸವನ್ನು ಸಂಗ್ರಹಿಸಿ ಕಸ ನಿರ್ವಹಣೆ ತ್ಯಾಜ್ಯ ಘಟಕಕ್ಕೆ ಕಳುಹಿಸಲಾಗುತ್ತಿದೆ. ಪ್ರತಿದಿನ ಕಸ ಸಂಗ್ರಹಿಸುವುದರಿಂದ ಸೊಳ್ಳೆ, ಕ್ರಿಮಿಕೀಟ ಉಂಟಾಗುವುದನ್ನು ತಡೆದು, ರೋಗ ನಿಯಂತ್ರಣ ಸಾಧ್ಯವಾಗುತ್ತಿದೆ. ಯಾವುದೇ ಕಾರಣಕ್ಕೂ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಬಾರದು ಎಂದು ಮನವಿ ಮಾಡಿದರು. ಪುರಸಭೆ ಅಭಿವೃದ್ಧಿ ಇತರ ಸುಧಾರಣೆಗೆ ಸಾರ್ವಜನಿಕರ ತೆರಿಗೆ ಅಗತ್ಯವಾಗಿದ್ದು, ಇದಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೂಡಲೆ ಎಲ್ಲರೂ ಹಣ ಸಂದಾಯ ಮಾಡಬೇಕು. ತೆರಿಗೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದಲ್ಲಿ ಕರ ವಸೂಲಾತಿ ಸಿಬ್ಬಂದಿ, ಪುರಸಭೆ ವ್ಯವಸ್ಥಾಪಕರನ್ನು ಭೇಟಿಯಾಗಬೇಕು ಎಂದರು. ಹಿರಿಯ ಆರೋಗ್ಯ ಪರಿವೀಕ್ಷಕ ಎಂ. ರವಿಕೀರ್ತಿ, ಪರಿಸರ ಇಂಜಿನಿಯರ್ ಹರೀಶಕುಮಾರ, ಪುರಸಭೆ ವ್ಯವಸ್ಥಾಪಕಿ ನಾಗರತ್ನಾ ಹೊಸಮನಿ, ಎಂ. ವೀರಾಚಾರ್ಯ, ಎಂ.ಎಚ್. ಭೋವಿ, ಮಾಲತೇಶ ಹಳ್ಳಿ, ತಪಸುಮ ಭಾನು, ಭಾಗ್ಯಮ್ಮ ಹಾವೇರಿ ಇದ್ದರು.