ಜಿಲ್ಲೆ

ಎಲ್ಲಾ ಕ್ಷೇತ್ರದಲ್ಲಿಯೂ ಹಾಸನ ಜಿಲ್ಲೆ ಗುರುತರ ಕೆಲಸ; ಶಾಸಕ ಎಚ್.ಪಿ. ಸ್ವರೂಪ್ ಶ್ಲಾಘನೆ

Hassan - Ramesh H R

ಹಾಸನ: ಹಾಸನ ಜಿಲ್ಲೆ ಎಂದರೆ ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಗುರುತರ ಕೆಲಸ ಮಾಡಿದೆ. ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಶ್ಲಾಘನೆ ವ್ಯಕ್ತಪಡಿಸಿದರು.

ನಗರದ ಸೆಂಟ್ ಜೋಸೆಫ್ ಶಾಲೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರಿಗೂ ಕೂಡ ಸನ್ಮಾನ ಮಾಡಿ ಗೌರವಿಸಲಾಗುತ್ತಿದೆ. 625ಕ್ಕೆ 625 ಪಡೆದಂತಹ ಉಲ್ಲಾಸ್ ಪಟೇಲ್, ಮರು ಮೌಲ್ಯಮಾಪನದಲ್ಲಿ ಅರಸೀಕೆರೆಯ ವಿದ್ಯಾರ್ಥಿ 625 ಅಂಕ ಪಡೆದಿದ್ದು ಹಾಗೂ ಅನೇಕ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿರುವುದನ್ನು ಗುರುತಿಸಿ ಸರ್ಕಾರಿ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆಯಿಸಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

ವಿದ್ಯಾರ್ಥಿಗಳನ್ನು ಶಿಕ್ಷಕರು ಏನಾದರೂ ಬೈದು, ಹೊಡೆದು ಬುದ್ಧಿವಾದ ಹೇಳಿದರೆ ಪೋಷಕರು ಬಂದು ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಎಂದರೆ ಪಿಯುಸಿ. ಪೋಷಕರು ಪಿಯು ಹಂತದಲ್ಲಿ ಮಕ್ಕಳಿಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಎಸ್‌ಎಸ್‌ಎಲ್‌ಸಿ. ಪರೀಕ್ಷೆ ನಡೆಯುವ ಮೊದಲು ಡಿಡಿಪಿಐ ಅವರು ಎಲ್ಲ ಶಿಕ್ಷಕರನ್ನು ಕರೆದು ಕಾರ್ಯಾಗಾರ ಮಾಡಿ ಹೆಚ್ಚಿನ ಫಲಿತಾಂಶ ಬರಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಡಿಡಿಪಿಐ ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದ ಗಡಿ ಕಾಯುವ ಯೋಧರಿಗೆ, ಅನ್ನ ಕೊಡುವ ರೈತರಿಗೆ ಹಾಗೂ ಶಿಕ್ಷಣ ಕೊಡುವ ನಮ್ಮ ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಸಂತ ಜೋಸೇಫ್ ಶಾಲೆಯಲ್ಲಿ ಶಾಸಕರು ಹಾಗೂ ಎಚ್.ಡಿ. ಕುಮಾರಸ್ವಾಮಿ ಓದಿದ್ದಾರೆ. ಹಾಸನಾಂಬೆ ಕೃಪೆಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಪಲಿತಾಂಶ ಬರುತ್ತಿದೆ. ಇದಕ್ಕೆ ಎಲ್ಲ ಹಂತದ ಶಿಕ್ಷಣ ಸಂಸ್ಥೆಯು ತಂಡವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ ಎಂದರು.

ಶಾಲೆ ಬಿಟ್ಟವರಿಗೆ ಶಾಲೆಗೆ ಬರುವಂತೆ ಶಿಕ್ಷಕರು ಮಾಡಬೇಕು. ಶಾಸಕರು ಸರ್ಕಾರಿ ಶಾಲೆಗೆ ಅನುದಾನ ಕೊಡಲು ಸಿದ್ಧರಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಳೆದ ಬಾರಿ ಆರನೇ ಸ್ಥಾನದಲ್ಲಿ ಇರುವಂತೆ ಈ ಬಾರಿ ಅದೆ ಸ್ಥಾನ ಉಳಿಸಿಕೊಂಡಿದ್ದೇವೆ. ಶಾಲೆ ಪ್ರಾರಂಭದಿಂದಲೇ ಶಿಕ್ಷಕರು ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ಯಾರು ಕೂಡ ಪರೀಕ್ಷೆಯಿಂದ ಹೊರ ಉಳಿಯಬಾರದು. ಇದರಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಜಿಲ್ಲೆಯ ಸ್ಥಾನ ಮೊದಲ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು. ಮಂಗಳೂರು, ಉಡುಪಿ ಸ್ಥಾನಕ್ಕೆ ಹಾಸನ ಜಿಲ್ಲೆ ಬರಲೇಬೇಕು. ಹಾಸನಾಂಬ ದೇವಿ ಆಶೀರ್ವಾದ ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಿಕ್ಷಣ ಇಲಾಖೆಯ ಎಚ್.ಟಿ. ಗೀತಾ, ಆನಂದ್, ಫಾದರ್ ಲಿಯೋ, ಬಸವರಾಜು, ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ಶಿವರಾಮೇಗೌಡ, ಚಂದ್ರಶೇಖರ್, ನೋಡಲ್ ಅಧಿಕಾರಿ ಮಲ್ಲಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.