ಹಾಸನ: ಯುವಜನತೆಯಲ್ಲಿ ಎಲ್ಲವನ್ನೂ ಸಾಧಿಸುವ ಅದಮ್ಯ ಶಕ್ತಿಯಿದೆ. ಆದರೆ ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿರುವುದು ವಿಷಾದನೀಯ ಎಂದು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಬಿ.ಜಿ. ಶಿವರಾಜು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನ ಆಶ್ರಯದಲ್ಲಿ ಜನ ಕಲ್ಯಾಣ ರಿಸರ್ಚ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಪರಿಪೂರ್ಣ ಚಾರಿಟಬಲ್ ಟ್ರಸ್ಟ್, ಹಾಸನ (ಡಾ. ಗುರುರಾಜ್ ಹೆಬ್ಬಾರ್ ಸ್ಥಾಪಿತ ಸಂಸ್ಥೆ) ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಪಂದನ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ ಶಾಪವಲ್ಲ. ಅದನ್ನು ವರವಾಗಿಸಿಕೊಳ್ಳಬೇಕು. ಭಾರತ ಒಂದು ಸುಂಸ್ಕೃತ ದೇಶ, ಆದರೆ ಇಲ್ಲಿನ ಯುವಜನಾಂಗ ಭ್ರಮೆಯಲ್ಲಿದ್ದಾರೆ. ಸೇವೆ ಮತ್ತು ತ್ಯಾಗ ಎರಡು ಸಂಪತ್ತುಗಳಿದ್ದಂತೆ. ವಿವೇಕಾನಂದರು ಮತ್ತು ಗಾಂಧಿಯವರು ಹಲವಾರು ಅತ್ಯದ್ಭುತ ನುಡಿಗಳನ್ನಾಡಿದ್ದಾರೆ. ಇಂದು ಎಲ್ಲವನ್ನು ಸೃಷ್ಟಿಸುವ ಅಗತ್ಯವಿಲ್ಲ. ಇರುವುದನ್ನೇ ಬಿತ್ತಿದ್ದರೆ ಸಾಕು ಎನ್ನುವುದನ್ನು ಅರಿಯಬೇಕು. ಸರಳತೆ ಜಗತ್ತಿನ ಸಾರವಾಗಬೇಕು. ಮನಸ್ಸು ಮುಕ್ತವಾಗಿದ್ದರೆ ತನಗೆ ತಾನೇ ಅವಕಾಶಗಳು ಅರಸಿ ಬರುತ್ತವೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ. ಗುರುರಾಜ್ ಹೆಬ್ಬಾರ್ ಅವರನ್ನು ಬಡವರ ಡಾಕ್ಟ್ರು ಎನ್ನುತ್ತಿದ್ದರು. ಅವರು ದುಡಿಮೆಯನ್ನ ಸಮಾಜಕ್ಕೆ ಬಳುವಳಿಯಾಗಿ ನೀಡುತ್ತಿದ್ದರು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಹೆಬ್ಬಾರ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ವಿದ್ಯಾಸೌಧ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮಂಜೇಗೌಡ ಅವರು ಮಾತನಾಡಿ, ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವಿದ್ದೇವೆ. ಸ್ಪರ್ಧೆಗೆ ಹೆಚ್ಚಿನ ಮನ್ನಣೆ. ಆದ್ದರಿಂದ ಯುವಜನತೆ ಸ್ಪರ್ಧೆ ನೀಡುವುದನ್ನು ಕಲಿಯಬೇಕು. ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಯಾರೇ ನಿಮ್ಮನ್ನು ತೆಗಳಿದರೂ ತಂದೆ-ತಾಯಿಗಳು ನಿಮ್ಮ ಜತೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಎಂ. ಬಿ.ಇರ್ಷಾದ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ನಾನು ಕೂಡ ಗೌರವಧನಗಳನ್ನು ತೆಗೆದುಕೊಂಡಿದ್ದೆ. ಪಡೆದುಕೊಂಡಿದ್ದನ್ನು ಯಾವುದಾದರೂ ಒಂದು ರೀತಿ ಹಿಂದಿರುಗಿಸಬೇಕು. ಜನರ ನಡುವೆ ಇದ್ದುಕೊಂಡೆ ಇತಿಹಾಸವಾದವರು ಡಾ. ಗುರುರಾಜ್ ಹೆಬ್ಬಾರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕರು ಹಾಗೂ ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ವಿ. ಕರೀಗೌಡ ಅವರು ಮಾತನಾಡಿ, ಕಲಾ ಕಾಲೇಜಿನಲ್ಲಿ ತಾವು ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನೆನೆಯುತ್ತಾ, ಈ ಯೋಜನೆಯು ಪ್ರಸ್ತುತ ನಗರದ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆಕಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಹಿಮ್ಸ್ ಪ್ರಾಂಶುಪಾಲ ಡಾ. ಬಿ.ಸಿ. ರವಿಕುಮಾರ್ ಮಾತನಾಡಿ, ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿನಂತೆ ಪ್ರತಿಯೊಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು. ಮಾನವೀಯತೆ ಎಲ್ಲರಲ್ಲೂ ಇರುತ್ತದೆ. ಸಮಾಜದಲ್ಲಿ ನೊಂದವರ ಆಶಾಕಿರಣವಾದಾಗ ಮಾತ್ರ ಸಾರ್ಥಕತೆ ಸಿಗುತ್ತದೆ ಎಂದು ತಿಳಿಸಿದರು.
ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಚರಾದ ಪ್ರೊ. ಎಚ್.ವಿ. ಲಕ್ಷ್ಮೀನಾರಾಯಣ ಮಾತನಾಡಿ, ಸಮಾಜಕ್ಕೆ ತುಡಿಯುವುದಕ್ಕಾಗಿ ವ್ಯಕ್ತಿಗಳು ಬೇಕಾಗಿದ್ದಾರೆ. ಗುರುರಾಜ್ ಹೆಬ್ಬಾರ್ ಅವರು ಜಿಲ್ಲೆಗೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಯುವ ಜನತೆಗೆ ಬೆಳಕು ಚೆಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ಗುರುರಾಜ್ ಹೆಬ್ಬಾರ್ ಅವರ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ವತಿಯಿಂದ ಎಲ್ಲ ಗಣ್ಯರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ನ ಸದಸ್ಯರಾದ ಮಹಾಲಕ್ಷ್ಮೀ, ಕಾರ್ಯದರ್ಶಿ ಡಾ.ಡಿ.ಜಿ. ಕೃಷ್ಣೇಗೌಡ, ಟ್ರಸ್ಟಿ ಕೆ.ಟಿ. ಜಯಶ್ರೀ, ಉಪಾಧ್ಯಕ್ಷರಾದ ಅಮ್ಜದ್‌ಖಾನ್, ಜಯಶ್ರೀ ನರ್ಸಿಂಗ್ ಹೋಂನ ಡಾ. ಜಿ.ಎನ್.ಹೇಮಲತಾ, ರೆಡ್‌ಕ್ರಾಸ್ ಸಭಾಪತಿ ಎಚ್.ಪಿ. ಮೋಹನ್, ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷರಾದ ಎಂ. ಮಾಧವ ಶೆಣೈ, ಡಾ. ಗುರುರಾಜ್ ಹೆಬ್ಬಾರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಜಿ. ಪ್ರತಿಭಾ, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಕೆ. ಪವನ್ ಹಾಜರಿದ್ದರು.
---
ಫೋಟೋ ಶೀರ್ಷಿಕೆ
17 ಎಚ್‌ಎಸ್‌ಎನ್ 02
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನ ಆಶ್ರಯದಲ್ಲಿ ಜನ ಕಲ್ಯಾಣ ರಿಸರ್ಚ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಪರಿಪೂರ್ಣ ಚಾರಿಟಬಲ್ ಟ್ರಸ್ಟ್, ಹಾಸನ (ಡಾ. ಗುರುರಾಜ್ ಹೆಬ್ಬಾರ್ ಸ್ಥಾಪಿತ ಸಂಸ್ಥೆ) ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಪಂದನ ಯೋಜನೆಯನ್ನು ಬಿ.ಜಿ. ಶಿವರಾಜು ಉದ್ಘಾಟಿಸಿದರು. ಡಾ. ಮಂಜೇಗೌಡ, ಬಿ.ವಿ. ಕರೀಗೌಡ, ಡಾ. ಬಿ.ಸಿ. ರವಿಕುಮಾರ್, ಡಾ. ಎಂ. ಬಿ.ಇರ್ಷಾದ್, ಪ್ರೊ. ಎಚ್.ವಿ. ಲಕ್ಷ್ಮೀನಾರಾಯಣ, ಮಹಾಲಕ್ಷ್ಮೀ, ಡಾ.ಡಿ.ಜಿ. ಕೃಷ್ಣೇಗೌಡ, ಕೆ.ಟಿ. ಜಯಶ್ರೀ, ಅಮ್ಜದ್‌ಖಾನ್, ಡಾ. ಜಿ.ಎನ್.ಹೇಮಲತಾ, ಎಚ್.ಪಿ. ಮೋಹನ್, ಎಂ. ಮಾಧವ ಶೆಣೈ, ಡಾ. ಜಿ. ಪ್ರತಿಭಾ, ಕೆ.ಟಿ. ಸತ್ಯಮೂರ್ತಿ, ಜಿ.ಕೆ. ಪವನ್ ಇದ್ದರು.