ಕಲಬುರಗಿ: ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್, ಎಂಬಿಬಿಎಸ್‌ನಂತ ಎಲ್ಲರೂ ಆಯ್ಕೆ ಮಾಡುವ ವಿಷಯಕ್ಕೆ ಮಾಡುವ ಬದಲು ನಮ್ಮ ಮನಸ್ಸಿಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿ ಅಧ್ಯಯನ ಮಾಡಬೇಕು. ಸ್ನೇಹಿತ, ಸಂಬಂಧಿಕರು ಮಾಡುತ್ತಾರೆ ಎಂದು ಇಷ್ಟದ ವಿರುದ್ಧ ಅಧ್ಯಯನದಲ್ಲಿ ತೊಡಗಿದರೆ ಯಶಸ್ಸು ದೊರೆತರೂ ನೆಮ್ಮದಿ ಸಿಗಲ್ಲ ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.
ನೂತನ ವಿದ್ಯಾಲಯದ ಅನಂತರಾವ ದೇಶಮುಖ ಸಭಾಗೃಹದಲ್ಲಿ ನೂತನ ವಿದ್ಯಾಲಯ ಸಂಸ್ಥೆ, ವಿಜಯವಾಣಿ ದಿನ ಪತ್ರಿಕೆ ಸಹಯೋಗದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ `ಪಿಯುಸಿ ನಂತರ ಮುಂದೇನು?' ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಉಪನ್ಯಾಸ ನೀಡಿದರು.
ಜೀವ ಉಳಿಯಬೇಕಾದರೆ ಜಿಂಕೆ ಓಡಬೇಕು, ಹೊಟ್ಟೆ ತುಂಬಬೇಕಾದರೆ ಸಿಂಹ ಓಡಬೇಕು. ಓಟ ಅನಿವಾರ್ಯ. ಓಡದಿದ್ದರೆ ಜೀವ ಉಳಿಯಲ್ಲ. ಕಾಲಕ್ಕೆ ತಕ್ಕಂತೆ ಪಿಯು ವಿದ್ಯಾರ್ಥಿಗಳು ವಿಷಯ ಆಯ್ಕೆಯಲ್ಲಿ ಮನಸ್ಸಿನ ಮಾತು ಕೇಳಬೇಕು. ನೂರಾರು ಹೊಸ ಕೋರ್ಸ್ಗಳಿದ್ದು, ಒಂದೆರಡು ವಿಷಯಕ್ಕೆ ಜೋತು ಬೀಳಬಾರದು ಎಂದು ಸಲಹೆ ನೀಡಿದರು.
ಎನ್‌ವಿ ಸಂಸ್ಥೆ ಅಧ್ಯಕ್ಷ ಡಾ.ಗೌತಮ ಆರ್.ಜಹಗೀರದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಡಾ.ಗುರುರಾಜ ಕರ್ಜಗಿ ಅವರು ವರದಾನವಾಗಿ ಬಂದಿದ್ದಾರೆ. ಶಿಕ್ಷಣ ತಜ್ಞರ ಸಹಯೋಗ, ಮಾರ್ಗದರ್ಶನದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಸಿಎಂಡಿ ವಿಜಯಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ಸಮಾಜಪರ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ. ಅಧ್ಯಯನಕ್ಕಾಗಿಯೇ ವಿದ್ಯಾರ್ಥಿ ಮಿತ್ರ ಪ್ರಕಟಿಸಲಾಗುತ್ತಿದೆ. ಓದಿ ಫಲಿತಾಂಶ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖರಾದ ಗೋವಿಂದ ಪೂಜಾರ, ಗುರುಮದ್ವಾಚಾರ್ಯ ನವಲಿ, ಜೀತೇಂದ್ರ ಕೋತಳಿಕರ್, ಮಹೇಶ ಬಡಿಗೇರ, ಗುರುರಾಜ ದಂಡಾಪುರ, ಶ್ರೀಕಾಂತ ಪಂಡಿತ, ಕಾಶೀನಾಥ ಪಾಂಚಾಳ, ಡಾ.ವಿಷ್ಣು ಗುಂಡಗುರ್ತಿ, ಸುತೇಶ ದೇಶಮುಖ ಇತರರಿದ್ದರು. ಶ್ರೀಕಾಂತ ಯಕ್ಕೆಳಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಘವೇಂದ್ರ ಕುಲ್ಕರ್ಣಿ ನಿರೂಪಣೆ ಮಾಡಿದರು. ಭಾರತಿ ಎಸ್.ಆರ್.ವಂದಿಸಿದರು.