ಜಿಲ್ಲೆ

ಎಲ್ಲರೊಳಗೂ ಒಂದಾಗಿದ್ದ ರಾಜ್‌ಕುಮಾರ್

ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ವಿಭಿನ್ನ ಅನುಭವಗಳನ್ನು ನೀಡಿ, ಎಲ್ಲರೊಳಗೂ ಒಂದಾಗಿದ್ದರು ಎಂದು ಖ್ಯಾತ ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಂಗವಾಹಿನಿ ಸಂಸ್ಥೆ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮೂರು ವರನಟ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಮತ್ತು ಕನ್ನಡ ಸಂವೇದನೆ ವಿಚಾರವನ್ನು ಕುರಿತು ಮಾತನಾಡಿದರು.

ಡಾ.ರಾಜ್‌ಕುಮಾರ್ ಅವರು ಸಿನಿಮಾಗಳ ಮೂಲಕ ನೀಡಿದ ವಿಭಿನ್ನ ಅನುಭವಗಳನ್ನು ಯಾವ ನಟನು ನೀಡಿಲ್ಲ. ಕಿಲಾಡಿ ರಂಗ, ಬೀದಿ ಬಸವಣ್ಣ, ಚೂರಿ ಚಿಕ್ಕಣ್ಣ, ಎಮ್ಮೆ ತಮ್ಮಣ್ಣನಂತಹ ಪಾತ್ರಗಳು ಕಿಲಾಡಿತನದಿಂದ ಕೂಡಿದ್ದವು. ಇದು ಅವರಲ್ಲಿ ತುಂಬಾ ಕಿಲಾಡಿತನವಿರುವುದನ್ನು ತೋರುತ್ತದೆ. ದಿನಗೂಲಿಯ ಜನ ದಿನದ ಶ್ರಮ ಮರೆಯಲು, ಬದುಕಿನ ಪಾಠ ಕಲಿಯಲು, ರಾಜ್‌ಕುಮಾರ್ ಸಿನಿಮಾಗಳಿಗೆ ಹೋಗುತ್ತಿದ್ದರು. ಅಂತವರಿಗೆ ರಾಜ್‌ಕುಮಾರ್ ಸರಳವಾಗಿ ಜೀವನ ಪಾಠ ಅರ್ಥ ಮಾಡಿಸುತ್ತಿದ್ದವರು.ವಿಜ್ಞಾನದಲ್ಲಿ ರಾಮನ್ ಎಫೆಕ್ಟ್ ಆದರೇ, ಸಿನಿಮಾದಲ್ಲಿ ಅಣ್ಣಾವ್ರ ಎಫೆಕ್ಟ್ ಎನ್ನಬಹುದು. ಅವರಿಗೆ ಗೊತ್ತಿಲ್ಲದೆ ಸಮಾಜದ ಮಾದರಿಯಾಗಿದ್ದರು. ಈ ನಿಟ್ಟನಲ್ಲಿ ಅವರು ಯಾವುದೇ ಗಿಮಿಕ್ಸ್‌ಗಳನ್ನು ಮಾಡುತ್ತಿರಲಿಲ್ಲ ಎಂಬುದು ಗಮನಾರ್ಹವಾಗಿದೆ ಎಂದರು.

ಟಿ.ಎಸ್.ನಾಗಾಭರಣ ಅವರಿಂದಾಗಿ ರಾಜ್ಕುಮಾರ್ ಅವರನ್ನು ನೋಡುವ ಅವಕಾಶ ಸಿಕ್ಕಿತು. ಚಿಗುರಿದ ಕನಸು ಚಿತ್ರಕ್ಕಾಗಿ ಅವರ ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡಬೇಕಾಯಿತು. ಜೀವಲೋಕದ ಜತೆಗೆ ಒಂದಾದಾಗ ವ್ಯಕ್ತಿಯೊಬ್ಬ ಪಾರದರ್ಶಕನಾಗುತ್ತಾನೆ. ಅದರಂತೆ ರಾಜ್‌ಕುಮಾರ್ ಸಿನಿಮಾ ಮತ್ತು ನಿಜಜೀವನದಲ್ಲೂ ಪಾರದರ್ಶಕವಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ದೀನಬಂಧು ಸಂಸ್ಥೆಯ ಜಿ.ಎಸ್.ಜಯದೇವ್, ಖ್ಯಾತ ಚಲನಚಿತ್ರ ಕಥೆಗಾರ ಬಿ.ಎ.ಮಧು, ಚಿತ್ರನಟ ಮಂಡ್ಯ ರಮೇಶ್, ಸಾಹಿತಿ ಡಾ.ಕೃಷ್ಣಮೂರ್ತಿ ಚಾಮರಂ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್‌ರಾಜ್ ಮೇಹು, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಆರ್.ಎಸ್.ಸುರೇಶ್ ಹಾಗೂ ಇತರರು ಹಾಜರಿದ್ದರು.