ಐಗಳಿ: ಎಲ್ಲರೂ ಒಂದಾಗಿ ಬಕ್ರೀದ್ ಆಚರಿಸಿದಾಗ ಹಬ್ಬಕ್ಕೆ ಮೆರುಗು ಬರುತ್ತದೆ. ಆಗ ಎಲ್ಲರೂ ಸಹೋದರರಂತೆ ಬಾಳಲು ಸಾಧ್ಯ ಎಂದು ಅಥಣಿ ಸಿಪಿಐ ಸಂತೋಷ ಹಳ್ಳೂರ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಕ್ರೀದ್ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳ ಜನ ಶಾಂತಿ ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದು, ಅದನ್ನು ಉಳಿಸಿಕೊಂಡು ಬಕ್ರೀದ್ ಆಚರಿಸಬೇಕು ಎಂದರು.
ಐಗಳಿ ಠಾಣೆ ಪಿಎಸ್‌ಐ ಚಂದ್ರಶೇಖರ ಸಾಗನೂರ ಮಾತನಾಡಿ, ಗೋಹತ್ಯೆ ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಹಿರಿಯರಾದ ಸಿ.ಎಸ್. ನೇಮಗೌಡ, ನೂರಅಹ್ಮದ್ ಡೊಂಗರಗಾಂವ, ಸಿದ್ರಾಯ ನಾಯಿಕ ಇತರರು ಮಾತನಾಡಿ, ಸೌಹಾರ್ದದಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆಂದು ಹೇಳಿದರು. ಮುಖಂಡರಾದ ಜಿ.ಎಸ್. ಬಿರಾದಾರ, ಬೈರು ಬಿಜ್ಜರಗಿ, ಪ್ರಕಾಶ ಪಾಟೀಲ, ಅಪ್ಪು ಜಮಾದಾರ ಇತರರಿದ್ದರು.