ಜಿಲ್ಲೆ

ಎಲ್ಲರೂ ಸಹಕರಿಸಿದರೆ ಅಭಿವೃದ್ಧಿ ಸಾಧ್ಯ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಮತ

ನೆಲಮಂಗಲ: ಪಕ್ಷಾತೀತವಾಗಿ ಪ್ರತಿಯೊಬ್ಬ ನಾಗರಿಕರೂ ಸಹಕಾರಿಸಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಅವಲಕುಪ್ಪೆ ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಸೋಲದೇವನಹಳ್ಳಿಯಿಂದ ಅವಲಕುಪ್ಪೆ ಮಾರ್ಗವಾಗಿ ಹೊಸಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಮಾಡುವಂತೆ ಗ್ರಾಮಸ್ಥರ ಬಹುದಿನ ಬೇಡಿಕೆಯಾಗಿತ್ತು. ಅದರಂತೆ 5 ಕಿಮೀ ರಸ್ತೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದರು.

ಜಿಲ್ಲಾಸ್ಪತ್ರೆಗೆ ಬೇಡಿಕೆ: ತಾಲೂಕಿನಾದ್ಯಂತ ಲಕ್ಷಾಂತರ ಜನರು ಇದ್ದಾರೆ. ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿ, ದೊಡ್ಡಬಳ್ಳಾಪುರಕ್ಕೆ ವಿಭಾಗಾಧಿಕಾರಿ ಕಚೇರಿ ಮಾಡಲಾಗಿದೆ. ತಾಲೂಕಿನಲ್ಲಿ ಯಾವುದೇ ಜಿಲ್ಲಾಮಟ್ಟದ ಕಚೇರಿಗಳಿಲ್ಲ. ಅದ್ದರಿಂದ ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಮಾಡಲು ಈಗಾಗಲೇ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ 5 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ, ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು ಎಂದು ಡಾ. ಕೆ. ಶ್ರೀನಿವಾಸಮೂರ್ತಿ ಹೇಳಿದರು.

ಮಾಜಿ ಶಾಸಕರಿಗೆ ತಿರುಗೇಟು: ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಶಾಸಕ ಎಂ.ವಿ. ನಾಗರಾಜು, ನಾವು ನೀಡಿದ್ದ ಅನುದಾನದಲ್ಲಿ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಡಾ. ಕೆ. ಶ್ರೀನಿವಾಸಮೂರ್ತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮಾಜಿ ಶಾಸಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಾಖಲೆಗಳನ್ನು ನೋಡಿದರೆ ಎಲ್ಲರಿಗೂ ನಿಜಾಂಶ ಗೊತ್ತಾಗುತ್ತದೆ ಎಂದರು.

ಪಶುಆಸ್ಪತ್ರೆಗೆ ಮನವಿ: ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳಿವೆ. ಅವರೆಲ್ಲರೂ ಹೈನುಗಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಅದ್ದರಿಂದ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಶುಆಸ್ಪತ್ರೆಯನ್ನು ನಿರ್ಮಿಸಿಕೊಡುಬೇಕು ಎಂದು ಗ್ರಾಂಧಿ ಗ್ರಾಮ ವಿಎಸ್‌ಎಸ್‌ಎನ್ ಅಧ್ಯಕ್ಷ ವೀರಮಾರೇಗೌಡ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಗ್ರಾಪಂ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಪುಟ್ಟಮ್ಮ, ಸದಸ್ಯರಾದ ರಾಮಕೃಷ್ಣಪ್ಪ, ರೂಪಾ, ಮಾರೇಗೌಡ, ಸಂದೀಪ್‌ಕುಮಾರ್, ಮುನಿರಾಜು, ಸಂತೋಷ್‌ಕುಮಾರ್, ಮಹದೇವಮ್ಮ, ಭಾಗ್ಯಮ್ಮ, ಸವಿತಾ, ರತ್ನಮ್ಮ, ಗೌರಮ್ಮ, ವೈ.ಆರ್. ಶ್ರೀನಿವಾಸ್, ಶಿವಕುಮಾರ್, ಎನ್. ರವಿ ಮತ್ತಿತರರು ಇದ್ದರು.