ಬೇಲೂರು ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಅರೇಹಳ್ಳಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನದಲ್ಲಿ ಪಿಎಸ್‌ಐ ಲಿಂಗರಾಜು ಮಾತನಾಡಿದರು. ಸರ್ದಾರ್ ಪಾಷಾ, ಚಿದುಗೌಡ, ಹರೀಶ್ ಇತರರು ಇದ್ದರು. 
ಜಿಲ್ಲೆ

ಎಲ್ಲರೂ ಸಂಚಾರ ನಿಯಮ ಪಾಲಿಸಿ

ಬೇಲೂರು: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಎಲ್ಲ ಸವಾರರು ಕಾನೂನು ಪಾಲನೆ ಮಾಡಲೇಬೇಕು ಎಂದು ಅರೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಲಿಂಗರಾಜು ಹೇಳಿದರು.

ತಾಲೂಕಿನ ಅರೇಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಅರೇಹಳ್ಳಿ ಪೊಲೀಸ್ ಠಾಣೆಯಿಂದ ಆಯೋಜಿಸಲಾಗಿದ್ದ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಮನಸ್ಸಿಗೆ ಬಂದಂತೆ ಓಡಿಸುತ್ತಿದ್ದಾರೆ. ಇದರಿಂದ ಅಪಘಾತಗಳಾಗಿ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿರುವ ಬಗ್ಗೆ ಪ್ರತಿನಿತ್ಯ ಮಾಧ್ಯಮಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯ ಬಳಸಬೇಕು. ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಬೇಕು ಹಾಗೂ ವಾಹನಗಳಿಗೆ ವಿಮೆ ಇಲ್ಲದಿದ್ದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು. ಆದ್ದರಿಂದ ಎಲ್ಲ ವಾಹನಗಳ ಚಾಲಕರು ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು ಹಾಗೂ ಚಾಲನೆ ವೇಳೆ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು ಎಂದರು.

ಅಪರಾಧ ವಿಭಾಗದ ಪಿಎಸ್‌ಐ ಸರ್ದಾರ್ ಪಾಷಾ, ನಾಗೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದುಗೌಡ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಪೊಲೀಸ್ ಸಿಬ್ಬಂದಿ ಹಾಜರಿದ್ದರು.