ಸಂತರು ಹಾಗೂ ಸಾಮಾನ್ಯ ಮನುಷ್ಯನ ಶರೀರ ಒಂದೇ. ಆದರೆ ವಿಚಾರ ಬೇರೆ. ಒಬ್ಬ ಜೀವನದಲ್ಲಿ ಸಂತೋಷ ಅನುಭವಿಸುತ್ತಾನೆ. ಇನ್ನೊಬ್ಬ ಚಿಂತೆಯಲ್ಲಿ ಕಾಲ ಕಳೆಯುತ್ತಾನೆ. ಸಾಮಾನ್ಯ ಮನುಷ್ಯ ತನಗೆ ಏನು ಕಾಣುತ್ತದೆಯೋ ಅದನ್ನು ನೋಡುತ್ತಾನೆ. ಆದರೆ, ಸಂತರು ಏನು ಕಾಣುತ್ತದೆಯೋ ಅದನ್ನು ಆಳವಾಗಿ ನೋಡುತ್ತಾರೆ.
ಒಳ್ಳೆಯ ದೃಷ್ಟಿಯಿಂದ ಸಂತರು ತಮ್ಮ ಜೀವನವನ್ನು ರೂಪಿಸಿಕೂಳ್ಳುತ್ತಾರೆ. ಸಾಮಾನ್ಯ ಮನುಷ್ಯ ಹಣ, ಆಸ್ತಿ ಅಂತಸ್ತು ಗಳಿಸಲು ನಿಂತಿರುತ್ತಾನೆ. ಗಳಿಸಿದರೂ ಅಂತ್ಯದಲ್ಲಿ ಅವನಿಗೆ ಸುಖ ಇರುವುದಿಲ್ಲ. ಆಸೆಗೆ ಕೊನೆಯೂ ಇರುವುದಿಲ್ಲ. ಇದೇ ಕಷ್ಟಕ್ಕೆ ಕಾರಣ. ನನನಗೆ ಭಗವಂತ ದುಡಿಯಲು ಕೈಗಳನ್ನು ನೀಡಿದ್ದಾನೆ. ಬುದ್ಧಿ ಕೊಟ್ಟಿದ್ದಾನೆ. ಸಾಕು ಅಂದರೆ ಜೀವನ ಸುಂದರವಾಗಿ ಇರುತ್ತದೆ. ಮನುಷ್ಯ ತನ್ನ ರೂಪದ ಬಗ್ಗೆ ಗಮನ ಕೊಡುತ್ತಾನೆ. ಆದರೆ, ಸಂತ ತನ್ನ ಸಾಧನೆ ಬಗ್ಗೆ ಗಮನ ಹರಿಸುತ್ತಾನೆ. ಮನುಷ್ಯನೆ, ನಿನಗೆ ಏನೇನು ಸಿಕ್ಕಿದೆಯೊ ಅದರಲ್ಲಿ ಖುಷಿ ಪಡು. ಆಗ ಜೀವನ ಸುಂದರ ಆಗುತ್ತದೆ. ಪಕ್ಷಿಗಳಿಗೆ ಕೈಗಳು ಇಲ್ಲ. ತಮ್ಮ ರೆಕ್ಕೆಯಿಂದ ಹಾರುತ್ತ ಹಾಡುತ್ತ ಆನಂದದಿಂದ ಜೀವನ ಕಳೆಯುತ್ತವೆ. ನಿಸರ್ಗ ದೇವರು ಕೊಟ್ಟಿದ್ದನ್ನು ಪ್ರಾಣಿಗಳು ಆನಂದದಿಂದ ಅನುಭವಿಸುತ್ತವೆ. ಆದರೆ, ಮನುಷ್ಯ ಅನುಭವಿಸುವುದಿಲ್ಲ. ನಮ್ಮ ಮುಂದೆ 15 ಹೂವುಗಳನ್ನು ಇಟ್ಟರೆ 20 ಹೂವುಗಳು ಏಕೆ ಇಲ್ಲ ಎಂದು ಚಿಂತಿಸುವ ಗುಣ ಬೆಳೆಸಿದಕೊಂಡರೆ ಜೀವನ ಹೇಗೆ ಸುಂದರ ಆಗುತ್ತದೆ?
ಅಲ್ಲಮ ಪ್ರಭುಗಳು ಜ್ಞಾನದ ಜ್ಯೋತಿ ಹಚ್ಚಿದರು. ಅವರು ಹೇಳುತ್ತಾರೆ. ಹೊರಗೆ ನೋಡಿದರೆ ಹೊರಗೆ ಬಯಲು. ಒಳಗೆ ನೋಡಿದರೆ ಒಳಗೆ ಬಯಲು. ನೆನೆದೆನೆಂದರೆ ಮನ ಬಯಲು. ನಾನು ಬಯಲು, ಗುಹೇಶ್ವರ ನೀನೂ ಬಯಲು… ನಾವು ಕಣ್ಣು ತೆರೆದರೆ ಎಲ್ಲಿ ನೋಡಿದರೂ ಬಯಲು. ನಾವು ಒಂದು ಕ್ಷಣ ಕಣ್ಣುಮುಚ್ಚಿ ಕುಳಿತು ನಮ್ಮ ಶರೀರದ ಬಗ್ಗೆ ಯೋಚನೆ ಮಾಡಿದರೆ ಒಳಗೂ, ಮನದಲ್ಲಿ ಎಲ್ಲಿ ನೋಡಿದರೂ ಬಯಲೇ ಬಯಲು. ಸಂತೋಷ ಹಾಗೂ ದುಃಖ ಎಂದರೆ ಒಂದು ಮೋಡ ಇದ್ದ ಹಾಗೆ. ಸ್ವಲ್ಪ ಹೊತ್ತು ಇರುತ್ತವೆ, ಹೋಗುತ್ತವೆ. ಮತ್ತೆ ಅಲ್ಲಿ ಬಯಲಾಗುತ್ತದೆ. ನಾವು ಮಾಡಿದ ಸಂಪತ್ತು ಯಾವುದೂ ಶಾಶ್ವತ ಅಲ್ಲ, ಎಲ್ಲವೂ ಬಯಲು. ಬಯಲು ಶಾಶ್ವತ. ಅದಕ್ಕಾಗಿ ಪ್ರತಿಯೊಬ್ಬರೂ ಸಂತರ ಜೀವನ ನೋಡಿ ಬದುಕಬೇಕು.
ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ: ಜಗತ್ತಿನಲ್ಲಿ ಎಷ್ಟೇ ಸಿರಿವಂತರಿದ್ದರೂ ರೈತನು ಬೆಳೆದ ಆಹಾರ ಪದಾರ್ಥಗಳನ್ನೇ ತಿನ್ನಬೇಕು. ಒಂದು ವೇಳೆ ರೈತನು ಒಕ್ಕದೇ ಇದ್ದರೆ ಪರಿಸ್ಥಿತಿ ಏನಾಗುತ್ತದೆ? ಎಲ್ಲರೂ ವಿಚಾರ ಮಾಡಬೇಕು. ರೈತ ಯುವಕರಿಗೆ ಇಂದು ವಧು ಸಿಗುವುದೂ ಕಷ್ಟವಾಗಿದೆ. ಆದರೆ, ರೈತರ ಮನೆಯವರೂ ಶಹರ ವಾಸಿ ಹುಡುಗನಿಗೆ, ಆತನಿಗೆ ಕುಡಿತದಂಥ ಚಟವಿದ್ದರೂ ಹೆಣ್ಣು ಕೊಡುವುದಿದೆ. ಲೋಕಕ್ಕೆ ಅನ್ನ ಹಾಕುವ ರೈತ ಕುಲದತ್ತ ಸಮಾಜದ ನಿರ್ಲಕ್ಷ್ಯ ಮುಂದುವರಿದರೆ ರೈತ ಸಂತಾನ ಬೆಳೆಯುವುದು ಹೇಗೆ? ಮುಂದೆ ಒಕ್ಕಲುತನ ಮಾಡಲು ಯಾರೂ ಮುಂದೆ ಬರದೇ, ಶ್ರೀಮಂತರು ಸೇರಿ ಎಲ್ಲರೂ ಉಪವಾಸ ಬೀಳುವ ದಿನಗಳು ಬರುತ್ತವೆ!
ರೈತಾಬಿ ಮಾಡಿಕೊಂಡಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ‘ಜವಾರಿ ಆಕಳನ್ನು’ ಸಾಕಬೇಕು. ಒಂದು ಆಕಳಿನಿಂದ ಮನೆಯವರೆಲ್ಲರೂ ಆರೋಗ್ಯದಿಂದ ಇರಬಹುದು. ಜವಾರಿ ಆಕಳ ಪ್ರತಿ ತ್ಯಾಜ್ಯವೂ ಮನುಕುಲದ ಒಳಿತಿಗಾಗಿ ಬಳಸಲು ಪ್ರಶಸ್ತವಾಗಿವೆ. ದೊಡ್ಡಿಯ ಗೊಬ್ಬರದಿಂದ ಮಾತ್ರ ಭೂಮಿಯ ಫಲವತ್ತತೆ ಹೆಚ್ಚಲು ಸಾಧ್ಯ. ರೈತ ನಗುತ್ತ ಬದುಕುವಂತಾದರೆ ಮಾತ್ರವೇ ಸಮಾಜ ನಗುತ್ತ ಇರಲು ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕು. ರೈತನನ್ನು ಗೌರವಿಸುವ ಮನಸು, ಸಮಾಜ ನಮ್ಮದಾಗಬೇಕು.
ನಿರೂಪಣೆ: ತುಕಾರಾಂ ಬ. ಜಾಧವ ಕನಕೂರ
ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಸ್ಥಗಿತ: ಇಲ್ಲಿಯ ಗೋಕುಲ-ರೇವಡಿಹಾಳ ಗ್ರಾಮದ ಬಳಿ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನವನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್ 1ರಂದು ಆರಂಭವಾಗಿದ್ದ ಪ್ರವಚನ 31ರವರೆಗೆ ನಡೆಯಬೇಕಾಗಿತ್ತು. ಆದರೆ, ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮಾ. 19ರಿಂದ ಪ್ರವಚನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರವಚನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಜ್ಞಾನಯೋಗಿ, ನಡೆದಾಡುವ ದೇವರೆಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ ನಿತ್ಯ ಬೆಳಗ್ಗೆ 6.30ರಿಂದ 7.30ರ ವರೆಗೆ ನಡೆಯುತ್ತಿತ್ತು. ಬೆಳಗಿನಜಾವದ ಸಮಯದಲ್ಲೂ ಅವಳಿನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಸೇರುತ್ತಿದ್ದರು. ಗುರುವಾರದಿಂದ ಪ್ರವಚನ ನಡೆಯುವುದಿಲ್ಲ ಎಂದು ಪ್ರವಚನ ಸಮಿತಿಯ ಶ್ರೀ ಮಲ್ಲಯ್ಯ ಸ್ವಾಮೀಜಿ, ಶಾಸಕ ಅರವಿಂದ ಬೆಲ್ಲದ, ಮಹೇಶ ದ್ಯಾವಪ್ಪನವರ, ಶಂಭು ಆರೇರ, ಸುಧೀರ ಮುದ್ದಿ ತಿಳಿಸಿದ್ದಾರೆ. ಶಿವಣ್ಣ ಮುದ್ದಿ ಕುಟುಂಬದ ತಾರಿಹಾಳದ ತೋಟದ ಮನೆಯಲ್ಲಿ ಶ್ರೀಗಳು ಪ್ರತಿ ಭಾನುವಾರ ಸಂಜೆ ಇಂಗ್ಲಿಷ್ ಭಾಷೆಯಲ್ಲಿ ಪ್ರವಚನ ಹೇಳುತ್ತಿದ್ದರು. ಅದನ್ನು ಸಹ ಸ್ಥಗಿತಗೊಳಿಸಲಾಗಿದೆ.