ತುಮಕೂರು: ಭಾರತೀಯ ಒಲಿಂಪಿಕ್ ಸಂಸ್ಥೆ ಸದಸ್ಯತ್ವ ಪಡೆದಿರುವ ಯೋಗಾಸನ ಭಾರತ್, ಕರ್ನಾಟಕ ಯೋಗಾಸನ ಸ್ಫೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್ಜಿ ಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಸಹಯೋಗದಲ್ಲಿ ತುಮಕೂರಿನಲ್ಲಿ ಡಿ.12ರಿಂದ 15ರವರೆಗೆ 5ನೇ ಹಿರಿಯ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ಏರ್ಪಡಿಸಿದೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಯೋಗಾ ಚಾಂಪಿಯನ್ಶಿಪ್ನಲ್ಲಿ ಒಟ್ಟು 32 ತಂಡಗಳಿಂದ ಮಹಿಳೆಯರು, ಪುರುಷರು ಎರಡು ವಿಭಾಗದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಯೋಗಾ ಚಾಂಪಿಯನ್ಶಿಪ್ಗೆ ತುಮಕೂರು ಆತಿಥ್ಯ ವಹಿಸುತ್ತಿದ್ದು, ಕ್ರೀಡೆಯಾಗಿ ಯೋಗವನ್ನು ಎಲ್ಲರೂ ಪ್ರೋತ್ಸಾಹಿಸುವಂತೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳುಸೋಮವಾರ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
ತುಮಕೂರಿನಲ್ಲಿ ರಾಷ್ಟ್ರಮಟ್ಟದ ಯೋಗಾಸನ ಸ್ವರ್ಧೆ ಆಯೋಜಿಸಿರುವುದು ಹೆಮ್ಮೆಯ ವಿಚಾರ. ಉತ್ತಮ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಜಗತ್ತಿನಲ್ಲಿ ಯೋಗ ಬಹಳ ಪ್ರಸಿದ್ಧಿ ಪಡೆದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಲಿದೆ. ಸರ್ಕಾರಗಳು ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದು, ಜಿಲ್ಲಾಡಳಿತ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಮುಂಬರುವ 2030ರ ಏಷ್ಯಾ ಗೇಮ್ಸ್ ಮತ್ತು 2036ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಯೋಗಾಸನದಲ್ಲಿ ಪ್ರದರ್ಶನ ಕ್ರೀಡೆಯಾಗಿ ಭಾಗವಹಿಸಲು ಅವಕಾಶ ನೀಡಿರುವುದು ಸಂತಸದ ವಿಚಾರವಾಗಿದೆ. ನಾಲ್ಕು ದಿನಗಳ ಈ ಸ್ಪರ್ಧೆ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು. 2020ರಲ್ಲಿ ಕೇಂದ್ರ ಸರ್ಕಾರ ಯೋಗವನ್ನು ಕ್ರೀಡೆ ಎಂದು ಮಾನ್ಯ ಮಾಡಿದ ನಂತರ ಇದುವರೆಗೂ ನಾಲ್ಕು ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಡಿ.12ರಿಂದ 15 ರವರಗೆ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೇ ಹಿರಿಯರ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 31 ರಾಜ್ಯಗಳ ತಲಾ ಒಂದೊಂದು ಪುರುಷ ಮತ್ತು ಮಹಿಳಾ ತಂಡಗಳ ಜತೆಗೆ, ನ್ಯಾಷನಲ್ ಪೊಲೀಸ್ ಅಕಾಡೆಮಿಯ ಒಂದು ತಂಡ ಸೇರಿ 32 ತಂಡಗಳ ನಾಲ್ಕು ನೂರು ಮಹಿಳಾ ಮತ್ತು ನಾಲ್ಕು ನೂರು ಪುರುಷ ಒಟ್ಟು 800 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಮಠದ ಯಾತ್ರಿನಿವಾಸದಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲಿಯೇ ಮಾಡಲಾಗುವುದು ಎಂದು ಕರ್ನಾಟಕ ಯೋಗಾಸನ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ನಿರಂಜನಮೂರ್ತಿ ಮಾಹಿತಿ ನೀಡಿದರು.