ಹಾಸನ: ಎಲ್ಲರೂ ಒಳ್ಳೆಯ ಸಂಘದಲ್ಲಿ ಇರಬೇಕು. ನೀತಿವಂತರಾಗಿರಬೇಕು. ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದ್ದು. ಆದರೆ ನಾವು ಇದಕ್ಕೆ ಪೂರಕವಾಗಿ ನಡೆಯದೆ ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಅವರು ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣಿಯವಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು ಇಂದಿಗೂ ಕೂಡ ಪ್ರಸ್ತುತ ಹಾಗೂ ಶಾಶ್ವತವಾಗಿರಲಿವೆ. ಅವರ ಹೇಳಿದ ಮಾರ್ಗದಲ್ಲಿ ನಾವುಗಳೆಲ್ಲಾ ಬದುಕು ಸಾಗಿಸಬೇಕಾಗಿದೆ. ಮಹನೀಯರ ತಿಳಿಸಿದ ಮಾರ್ಗಗಳನ್ನು ನಾವು ಅನುಸರಿಸಿಕೊಂಡು ಸಮಾಧಾನದಿಂದ ಹೋಗಬೇಕು. ಜಯಂತಿಯ ಒಂದು ದಿನ ಮಾತ್ರ ಪಾಲಿಸಿದರೆ ಸಾಲದು. ನಮ್ಮ ಜತೆಗೆ ನಮ್ಮ ಮಕ್ಕಳಲ್ಲಿ, ನಮ್ಮ ಮನೆಗಳಲ್ಲಿ ಶಾಂತಿ, ಸಂಯಮದಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಬುದ್ಧ ತನ್ನ ಕಾಲಮಾನದಲ್ಲಿ ಜಗತ್ತು ಎಂತಹ ಸತ್ಯಗಳಿಂದ ದೂರವಾಗಿದೆ ಎಂದು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದಾಗೆ ಬುದ್ಧ, ಬಸವ ಹಾಗೂ ಗಾಂಧೀಜಿ ನಮ್ಮ ಪರಂಪರೆಯ ತ್ರೀಮೂರ್ತಿಗಳು. ಇವರು ಹೇಳಿದನ್ನು ತಮ್ಮಲ್ಲಿ ಅರಗಿಸಿಕೊಂಡ ಮಹಾನ್‌ಭಾವರು ಎಂದು ಹೇಳಿದರು.
ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ಮಾತನಾಡಿ, ಬುದ್ಧ ಪೂರ್ಣಿಮೆಯನ್ನು ಭಗವಾನ್ ಬುದ್ಧನ ಜನ್ಮ, ಸತ್ಯದ ಜ್ಞಾನ ಮತ್ತು ಮಹಾಪರಿನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧ ಪೂರ್ಣಿಮೆಯು ಬುದ್ಧನ ಜೀವನಕ್ಕೆ ಸಂಬಂಧಿಸಿಲ್ಲ. ಆದರೆ ಈ ಪೂರ್ಣಿಮಾ ದಿನಾಂಕದಂದು, ಕಾಡಿನಲ್ಲಿ ಅಲೆದಾಡುವ ಮತ್ತು ಕಠಿಣ ತಪಸ್ಸು ಮಾಡಿದ ನಂತರ, ಬುದ್ಧನು ಬೋಧಗಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು ಎನ್ನುವ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಗೌತಮ ಬುದ್ಧರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದವರು. ಬುದ್ಧ ಪೂರ್ಣಿಮೆಯಂದು, ಭಗವಾನ್ ಬುದ್ಧನ ಅನುಯಾಯಿಗಳು ಅವರ ಬೋಧನೆಗಳನ್ನು ಆಲಿಸುತ್ತಾರೆ ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಎಂದರು.
ಧಮ್ಮಬೋಧಿ ಮತ್ತು ಬಿಕ್ಕು ಸಂಘದ ಪೂಜ್ಯ ಬಿಕ್ಕು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಪಂಚದಲ್ಲಿ ಆಶಾಂತಿಯುತ ವಾತಾವರಣ ಸೃಷ್ಟಿಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬುದ್ಧರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬುದ್ಧರ 2569 ನೇ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಚಾರ. ಇದೆ ಮೊದಲ ಭಾರಿಗೆ ಕರ್ನಾಟಕ ಸರ್ಕಾರ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿ.ಪೂ. 623ನೇ ವೈಶಾಖ ಹುಣ್ಣಿಮೆ ದಿನದಂದು ಜನಿಸಿದ ಭಗವಾನ್ ಬುದ್ದರು ತಮ್ಮ 29ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನ, ಸಂಪತ್ತು ರಾಜ್ಯಾಧಿಕಾರ ತೊರೆದು ತಮ್ಮ 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ತಮ್ಮ 80ನೇ ವಯಸ್ಸಿನಲ್ಲಿ ಪರಿನಿಬ್ಬಾಣ ಹೊಂದುತ್ತಾರೆ. ಕಾಕತಾಳೀಯ ಎಂಬಂತೆ ಈ ಮೂರು ಘಟನೆಗಳು ಪವಿತ್ರ ವೈಶಾಖ ಹುಣ್ಣಿಮೆ ದಿನದಂದೆ ಘಟಿಸುತ್ತವೆ. ಈ ದಿನವನ್ನು ಪ್ರಪಂಚದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಬುದ್ಧ ಎಂದರೆ ಬೆಳಕು ಅಥವಾ ಜ್ಞಾನ. ಗೌತಮ ಬುದ್ಧ ಭಾರತದ ನೆಲದಲ್ಲಿ ಜನ್ಮತಾಳಿದ ಮಾನವೀಯತೆಯ ಮೂಲ ಜೀವಧಾತು. ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯಿತಿ ಉಪನಿರ್ದೇಶಕ ಚಂದ್ರಶೇಖರ್, ದಮ್ಮಾಚಾರಿ, ಭಾರತಿಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜು, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಯ್ಯ ಬೌದ್ಧ, ಎನ್.ಬಿ. ವೀರಭದ್ರಯ್ಯ, ಅನಂತಸ್ವಾಮಿ, ತೋಟೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಫೀರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಖಜಾಂಚಿ ಕೆ.ಆರ್. ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎೆಚ್.ಪಿ. ತಾರನಾಥ್ ಇತರರು ಉಪಸ್ಥಿತರಿದ್ದರು.