ಮುರಗುಂಡಿ: ಸಸಿ ನೆಟ್ಟು ಬೆಳೆಸುವ ಮೂಲಕ ನಿಸರ್ಗ ಪ್ರೇಮ ರೂಢಿಸಿಕೊಳ್ಳಬೇಕಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನೀಕರಣದ ನೆಪದಲ್ಲಿ ಗಿಡ-ಮರ ಕಡಿದು ನಗರೀಕರಣಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಪರಿಣಾಮ ಕಾಂಕ್ರಿಟ್ ಕಾಡು ನಿರ್ಮಾಣವಾಗುತ್ತಿದೆ. ಸರ್ಕಾರಿ ಕಚೇರಿಗಳು, ಶಾಲೆಗಳ ಆವರಣದಲ್ಲಿ ಸಸಿ ನೆಟ್ಟು, ಪೋಷಿಸುವ ಕಾರ್ಯ ಮಾಡಬೇಕಿದೆ. ಹಾಗಾಗಿ ಇಂತಹ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಅಶ್ವಿನಿ ಕಾಟಕರ, ಮುಖ್ಯಶಿಕ್ಷಕ ರವೀಂದ್ರ ಕಡಾಕಡಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಕ್ಬುಲ್ ನದಾಫ್, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಗ್ರಾಪಂ ಸದಸ್ಯರಾದ ಬರಮಾ ಮಗಾಡಿ, ಮಹಾದೇವ ಕೋರಿ, ರಮೇಶ ಕುಸನಾಳೆ, ಪುರಸಭಾ ಸದಸ್ಯ ರಾಜು ಗುಡೋಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಜಿಪಂ ಅಧಿಕಾರಿ ವೀರಣ್ಣ ವಾಲಿ ಇತರರಿದ್ದರು.