ಕೆ.ಆರ್.ನಗರ ಪಟ್ಟಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾ ಯಿತು. ಪ್ರಕಾಶ್, ಸೌಮ್ಯಾ ಲೋಕೇಶ್, ಎಸ್.ಸಂತೋಷ್, ಸತೀಶ್, ಡಾ.ಜಯಣ್ಣ ಇದ್ದರು.  
ಜಿಲ್ಲೆ

ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವಂತಾಗಲಿ


ಶಾಸಕ ಸಾ.ರಾ.ಮಹೇಶ್ ಆಶಯ


ಕೆ.ಆರ್.ನಗರ: ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವಂತಾಗಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಡಾ.ರಾಜ್ ಬಾನಂಗಳದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಮರೆಯಬಾರದು ಎಂದರು.

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯನ್ನು ಸ್ವಾತಂತ್ರೃ ಪೂರ್ವ 1905 ರಲ್ಲಿ ಪ್ರಾರಂಭಿಸಿದರು. ಆ ಮೂಲಕ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ ಇವರಾಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಗಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿದರು. ಅದರಂತೆ ಮೈಸೂರು ರಾಜ್ಯ ಉದಯವಾಯಿತು ಎಂದರು.

ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿದರು. ಪುರಸಭಾ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಸೌಮ್ಯಾ ಲೋಕೇಶ್, ಮೂಳೆತಜ್ಞ ಡಾ.ಮೆಹಬೂಬ್ ಖಾನ್, ತಹಸೀಲ್ದಾರ್‌ಗಳಾದ ಎಸ್.ಸಂತೋಷ್, ಎಂ.ಎಎಸ್.ಯಧುಗಿರೀಶ್, ತಾಪಂ ಇಒ ಸತೀಶ್, ಹಾರಂಗಿ ಇಇ ಹೀರಣ್ಣನಾಯಕ, ಎಇಇಗಳಾದ ವಿನುತ್, ಅರ್ಕೇಶ್ ಮೂರ್ತಿ, ಕಸಪಾ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್, ಬಿಸಿಎಂ ಅಧಿಕಾರಿ ಜಿ.ಜೆ.ಮಹೇಶ್, ಬಿಇಒ ಗಾಯತ್ರಿ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಹಾಜರಿದ್ದರು.

ಪತ್ರಕರ್ತರಾದ ಚುಂಚನಕಟ್ಟೆ ಸಿ.ಜಿ.ಮಧು, ಎಸ್.ಯೋಗಾನಂದ್, ಡಾ.ಮೆಹಬೂಬ್ ಖಾನ್, ಡಾ.ಕೆ.ಎಸ್.ಮಹೇಂದ್ರಪ್ಪ, ಡಾ.ಚಂದ್ರಕಲಾ, ಡಾ.ದೇವೇಂದ್ರಕುಮಾರ್, ಪುರಸಭಾ ಮಾಜಿ ಸದಸ್ಯ ಅಸ್ಲಾಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಯಾನಿಸಲಾಯಿತು.

ಇದಕ್ಕೂ ಮುನ್ನ ಪಟ್ಟಣದ ಶ್ರೀಕೃಷ್ಣರಾಜೇಂದ್ರ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನ ಆವರಣದಿಂದ ಪ್ರಾರಂಭವಾದ ಮೆರವಣಿಗೆ ವಿವಿ ರಸ್ತೆ, ಸಿಎಂ ರಸ್ತೆ ಮೂಲಕ ಡಾ.ರಾಜ್ ಬಾನಂಗಳ ತಲುಪಿತು.

ಗೊಂದಲ: ಮೆರವಣಿಗೆ ನಮ್ಮ ಬಡಾವಣೆ ಬಳಸಿಕೊಂಡು ಬರುತ್ತಿತ್ತು. ಆದರೆ ಇಂದು ನಮ್ಮ ಬಡಾವಣೆಗೆ ಮೆರವಣಿಗೆ ಬಂದಿಲ್ಲ ಎಂದು ಪಟ್ಟಣದ ಆಂಜನೇಯ ಬಡಾವಣೆಯ ಕೆಲವು ಮುಖಂಡರು ವೇದಿಕೆ ಕಾರ್ಯಕ್ರಮ ಆರಂಭವಾಗುವ ಸಮಯದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಎಚ್ಚೆತ್ತ ಶಾಸಕ ಸಾ.ರಾ.ಮಹೇಶ್, ಡಾ.ರಾಜ್ ಬಾನಂಗಳದಲ್ಲಿ ಜಮಾವಣೆಗೊಂಡಿದ್ದ ಕಲಾತಂಡಗಳು, ಮಂಗಳವಾದ್ಯ ಹಾಗೂ ಸ್ತಬ್ಧಚಿತ್ರಗಳು ಮತ್ತೆ ಡಾ.ರಾಜ್ ಬಾನಾಂಗಳದಿಂದ ಆಂಜನೇಯ ಬ್ಲಾಕ್ ಹಾಗೂ ಬಜಾರ್ ರಸ್ತೆ ಮೂಲಕ ಮೆರವಣಿಗೆ ಬರುವಂತೆ ಸೂಚಿಸಿದರು. ಶಾಸಕರ ಸೂಚನೆಯಂತೆ ಮೆರವಣಿಗೆ ನಡೆಯಿತು. ಬೆಳಗ್ಗೆ 10 ಗಂಟೆಗೆ ಇದ್ದ ಧ್ವಜಾರೋಹಣ ಕಾರ್ಯಕ್ರಮ ಗೊಂದಲಗಳಿಂದಾಗಿ ಮಧ್ಯಾಹ್ನ 1 ಗಂಟೆ ಮೇಲೆ ನೆರವೇರಿತು. ಅಲ್ಲಿಯವರೆಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಸಿವಿನಿಂದ ಕಂಗೆಟ್ಟಿದ್ದರು.