ಗುಂಡ್ಲುಪೇಟೆ: ಸಮಾಜದಲ್ಲಿ ಶಿಸ್ತನ್ನು ಕಾಪಾಡಲು ಎಲ್ಲರಿಗೂ ಕಾನೂನು ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶಿವಕುಮಾರ್ ತಳವಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವ್ಯಕ್ತಿ ಅರಿವಿನ ಕೊರತೆಯಿಂದ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ತಪ್ಪೇ ಅಗಿರುತ್ತದೆ. ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳು ಗ್ರಾಮಮಟ್ಟದಲ್ಲಿಯೂ ಕಾನೂನು ಅರಿವು ಶಿಬಿರ ಆಯೋಜಿಸಿ ಸಾಮಾನ್ಯ ಜನರಿಗೆ ಕಾನೂನು ತಿಳಿವಳಿಕೆ ಮೂಡಿಸುತ್ತಿವೆ ಎಂದು ಹೇಳಿದರು.
ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಕಾಂತಮ್ಮ, ತಹಸೀಲ್ದಾರ್ ರವಿಶಂಕರ್, ತಾಪಂ ಇಒ ಶ್ರೀಕಂಠರಾಜೇ ಅರಸು, ಕಾರ್ಮಿಕ ಇಲಾಖೆ ನಿರೀಕ್ಷಕ ನಾರಾಯಣಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ, ಶಿರಸ್ತೇದಾರ್ ಮಹೇಶ್ ಇತರರು ಇದ್ದರು.