ಬಸವಕಲ್ಯಾಣದಲ್ಲಿ ೯ನೇ ವಾರ್ಷಿಕ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ್ ವಿಚಾರ ಮಂಡಿಸಿದರು. ಸಜ್ಜಾದೆ ನಶೀನ್ ಸೈಯದ್ ಮುಹಮ್ಮದ್ ಅಲಿಅಲ್ ಹುಸೇನಿ, ಖಾಜಾ ಜಿಯಾವುಲ್ ಹಸನ್ ಜಾಗೀರದಾರ, ಪ್ರೊ.ಮುಹಮ್ಮದ್ ಸಲಿಮುದ್ದೀನ್‌ಸಾಬ್ ಇಂಜಿನಿಯರ್, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಸಿ.ಎಂ. ಇಬ್ರಾಹಿಂ, ಧನರಾಜ ತಾಳಂಪಳ್ಳಿ, ಸುನೀಲ ಪಾಟೀಲ್, ಯಶೋಧಾ ರಾಠೋಡ್, ಮುಜಾಹಿದ್ ಪಾಶಾ ಖುರೇಶಿ ಶಿವಾನಂದ ಮೇತ್ರೆ, ಡಾ.ಭುರಳೆ ಇತರರಿದ್ದರು. 
ಜಿಲ್ಲೆ

ಎಲ್ಲರಲ್ಲಿರಲಿ ಆಂತರಿಕ ಶುಚಿತ್ವ ಕಾಳಜಿ

ಬಸವಕಲ್ಯಾಣ: ಬದುಕಿನಲ್ಲಿ ಶರೀರದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ವಹಿಸುವ ಕಾಳಜಿ ಆತ್ಮದ ಆರೋಗ್ಯ, ಆಂತರಿಕ ಶುಚಿತ್ವಕ್ಕೂ ಕೊಡುವ ಅಗತ್ಯವಿದೆ. ಆತ್ಮ ಕೆಟ್ಟರೆ ಅಲ್ಲಿರೋದು ಕತ್ತಲೆ ಎಂಬ ಪ್ರಜ್ಞೆ ಇರಬೇಕು ಎಂದು ಖ್ಯಾತ ಪ್ರವಚನಕಾರ ಮಂಗಳೂರಿನ ಮುಹಮ್ಮದ್ ಕುಂಞ್ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್‌ನಿಂದ ನಗರದ ರಥ ಮೈದಾನದ ಬಿಕೆಡಿಬಿ ಸಭಾಂಗಣದಲ್ಲಿ ಹಮ್ಮಿಕೊಂಡ ೯ನೇ ವಾರ್ಷಿಕ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಭಾನುವಾರ ಜೀವನದ ಉದ್ದೇಶ ಕುರಿತು ಮಾತನಾಡಿದ ಅವರು, ಪವಿತ್ರ ಕುರಾನ್‌ನಲ್ಲಿ ಸಂದೇಶ, ದಾರ್ಶನಿಕರ ಮಾರ್ಗದರ್ಶನ ಕುರಿತು ವಿಶ್ಲೇಷಣಾತ್ಮಕ ವಿಚಾರ ಮಂಡಿಸಿದರು.

ಮನುಷ್ಯನ ಬದುಕಿನ ಉದ್ದೇಶ ಸಮಗ್ರ ಚಿಂತನೆ. ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗಬೇಕು? ಮರಣ ನಂತರ ಎಲ್ಲಿಗೆ ಹೋಗಬೇಕು ಎಂಬ ಪ್ರಜ್ಞೆ ಅವಶ್ಯಕ. ಕಷ್ಟಪಡುವ ವ್ಯಕ್ತಿಯನ್ನು ಪ್ರಶ್ನಿಸಿದರೆ ಬದುಕಿಗಾಗಿ ಎಂದು ಉತ್ತರಿಸುತ್ತಾನೆ. ಆದರೆ ಯಾಕೆ ಬದುಕುತ್ತಿ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ನಿನ್ನನ್ನು ನೀನು ಅರಿಯುವುದೇ ತತ್ವಜ್ಞಾನ ಎಂದು ಖ್ಯಾತ ತತ್ವ ಜ್ಞಾನಿ ಅರಿಸ್ಟಾಟಲ್ ಹೇಳುತ್ತಾನೆ. ನಾನು ಯಾರು ಎಂಬುದನ್ನು ಅರಿತರೆ ಬದುಕಿನ ಗುರಿ, ವಾಸ್ತವ ಗೊತ್ತಾಗುತ್ತದೆ ಎಂದರು.

ನೀನು ಯಾರು ಎಂಬ ಪ್ರಶ್ನೆಗೆ ಪವಿತ್ರ ಕುರಾನ್‌ನಲ್ಲಿ ನೇರ, ಸ್ಪಷ್ಟ ಉತ್ತರ ಕೊಡಲಾಗಿದೆ. ಸೃಷ್ಟಿಕರ್ತ ದೇವನ ಪ್ರತಿನಿಧಿಯಾಗಿ ನೀನು ಭೂಮಿಯಲ್ಲಿರುವೆ. ಈ ಭೂಮಿಯನ್ನು ಸ್ವರ್ಗವನ್ನಾಗಿಸಬೇಕಾದ ಜವಾಬ್ದಾರಿ ಇರುವವ ಎಂದು ತಿಳಿಹೇಳಲಾಗಿದೆ. ಬದುಕಿನ ಉದ್ದೇಶ ಕುರಿತ ಚರ್ಚೆ ಜೀವನ ಮುಗಿಸುವುದಕ್ಕೆ ಸೀಮಿತವಲ್ಲ. ಅದು ನಿಮ್ಮ ಮರಣದೊಂದಿಗೆ, ಮರಣದ ನಂತರವೇನು ಎಂಬ ಪ್ರಶ್ನೆಯೊಂದಿಗೆ ಜೋಡಿಸಲ್ಪಟ್ಟ ವಿಷಯ ಎಂದು ಹೇಳಿದರು.

ಮರಣ ನಮ್ಮ ಬದುಕಿನ ಅಸಹಾಯಕತೆ ದರ್ಶನ. ಈ ಬಗ್ಗೆ ಪವಿತ್ರ ಕುರಾನ್‌ನಲ್ಲಿ ಎಚ್ಚರಿಸಲಾಗಿದೆ. ಇಹಲೋಕದ ಬದುಕು ತಾತ್ಕಾಲಿಕ. ಜಗತ್ತಿನಲ್ಲಿ ಪ್ರತಿಯೊಂದು ಆತ್ಮ ಮರಣದ ರುಚಿ ಅನುಭವಿಸಲೇಬೇಕು. ಮರಣ ನಿರಾಕರಿಸುವವರು ಯಾರೂ ಇಲ್ಲ. ನಿಮ್ಮ ಬದುಕಿನ ಕರ್ಮಗಳಿಗೆ ಪ್ರತಿಫಲ ಕೊಡಲು ದೇವನ ನ್ಯಾಯಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂದು ಬದುಕಿನ ಪ್ರತಿಫಲ ಪಡೆಯುತ್ತೀರಿ ಎಂದು ಸ್ಪಷ್ಟ ಮತ್ತು ನಿಖರವಾಗಿ ಹೇಳಿಕೊಡಲಾಗಿದೆ ಎಂದರು.

ಬದುಕಿನ ಆರಂಭದಂತೆ ಅಂತ್ಯವೂ ಮುಖ್ಯ. ಈ ಬದುಕು ಸಂಘರ್ಷಮಯ. ಮರಣದ ಸ್ಪಷ್ಟ ಅರಿವು, ಸತ್ಯದ ಪ್ರಜ್ಞೆ ಇದ್ದರೆ ಬದುಕಿನ ಉದ್ದೇಶ ಸ್ಪಷ್ಟವಿರುತ್ತದೆ. ದೈವಿಕ ಮಾರ್ಗ, ಧಾರ್ಮಿಕ ಗ್ರಂಥಗಳ ಸಂದೇಶಗಳು ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುತ್ತವೆ. ಜಾಗರೂಕತೆ ಇಲ್ಲದಿದ್ದರೆ ಬದುಕಿನ ದಾರಿ ತಪ್ಪುತ್ತದೆ ಎಂದು ಎಚ್ಚರಿಸಿದರು.

ಜಮಾತೆ ಇಸ್ಲಾಮಿ ಹಿಂದ್ ರಾಷ್ಟಿçಯ ಉಪಾಧ್ಯಕ್ಷ ಪ್ರೊ.ಮುಹಮ್ಮದ್ ಸಲಿಮುದ್ದೀನ್ ಸಾಬ್ ಇಂಜಿನಿಯರ್, ಶ್ರೀ ಬಸವಪ್ರಭು ಸ್ವಾಮೀಜಿ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಶ್ರೀ ಶಿವಾನಂದ ಸ್ವಾಮೀಜಿ, ಖಾಜಾ ಬಂದಾನವಾಜ್ ದರ್ಗಾ ಮುಖ್ಯಸ್ಥ ಸಜ್ಜಾದೆ ನಶೀನ್ ಸೈಯದ್ ಮುಹಮ್ಮದ್ ಅಲಿಅಲ್ ಹುಸೇನಿ, ಖಾಜಾ ಜಿಯಾವುಲ್ ಹಸನ್ ಜಾಗಿರದಾರ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಧನರಾಜ ತಾಳಂಪಳ್ಳಿ, ಇಲಿಯಾಸ್ ಬಾಗವಾನ್, ಸಿಪಿಐ ಅಲಿಸಾಬ್, ಅಜೀಜ್ ಶಾನಾ, ವೀರಣ್ಣ ಹಲಶೆಟ್ಟೆ, ಯಶೋಧಾ ರಾಠೋಡ್, ರವೀಂದ್ರ ಗಾಯಕವಾಡ, ಸುನೀಲ ಪಾಟೀಲ್, ಬಸವರಾಜ ಸ್ವಾಮಿ, ನೀಲಕಂಠ ರಾಠೋಡ್, ಅರ್ಜುನ ಕನಕ, ಡಾ.ಬಾಲಕೃಷ್ಣ ರಾಠೋಡ್, ಅನ್ವರ್ ಭೋಸ್ಗೆ, ರಫೀಕ್ ಅಹ್ಮದ್ ಗಾದಗಿ, ನರಸಿಂಗರೆಡ್ಡಿ ಗದಲೆಗಾಂವ, ರವೀಂದ್ರ ಕೊಳಕೂರ, ರಾಜೇಶ್ವರಿ ವರ್ಧನ್, ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಅಸ್ಲಂ ಜನಾಬ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಕಾರ್ಯಾಧ್ಯಕ್ಷ ಶಿವಾನಂದ ಮೇತ್ರೆ, ಪ್ರಧಾನ ಕಾಯದರ್ಶಿ ಗುರುನಾಥ ಗಡ್ಡೆ, ಮೌಲಾನಾ ಅಬ್ದುಲ್ ಸಲಾಂ ಹಾಸ್ಮಿ, ಶಾಂತಲಿಂಗ ಮಠಪತಿ, ಮಿರ್ಜಾ ಅನ್ವರ್ ಬೇಗ್, ನಯಿಮುದ್ದೀನ್ ಚಾಬುಕಸವಾರ್ ಇತರರಿದ್ದರು. ಕಲೀಂ ಆಬೇದ್ ನಿರೂಪಣೆ ಮಾಡಿದರು. ಜುಲ್ಫೇಕಾರ ಅಹ್ಮದ್ ವಂದಿಸಿದರು.

ಆಚಾರ-ವಿಚಾರ ಭಿನ್ನವಾಗಿದ್ದರೂ ಒಬ್ಬನೇ ಸೃಷ್ಟಿಕರ್ತ: ಆಚಾರ-ವಿಚಾರ, ಪೂಜಾ ಪದ್ಧತಿ ವಿಭಿನ್ನವಾಗಿದ್ದರೂ ನಮ್ಮೆಲ್ಲರ ಸೃಷ್ಟಿಕರ್ತ ಒಬ್ಬನೇ. ಜೀವನದ ಉದ್ದೇಶ ತಿಳಿಸಿಕೊಡಲು ಪ್ರತಿನಿಧಿಗಳನ್ನು ಕಳಿಸಿಕೊಟ್ಟಿದ್ದಾನೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಷ್ಟಿçಯ ಉಪಾಧ್ಯಕ್ಷ ಪ್ರೊ.ಮುಹಮ್ಮದ್ ಸಲಿಮೊದ್ದೀನ್‌ಸಾಬ್ ಇಂಜಿನಿಯರ್ ಹೇಳಿದರು. ಐತಿಹಾಸಿಕ ನೆಲ ಕಲ್ಯಾಣದಲ್ಲಿ ಒಂಬತ್ತು ವರ್ಷಗಳಿಂದ ಕುರಾನ್ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲ ಧರ್ಮೀಯರು ಭಾಗವಹಿಸಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ನಿಜವಾದ ಭಾರತದ ಚಿತ್ರಣ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭೂಮಿಯಲ್ಲಿ ಶಾಂತಿ, ಸೌಹಾರ್ದ, ತಮ್ಮ ಜೀವನ ಹಾಗೂ ಸಮಾಜದಲ್ಲಿ ನ್ಯಾಯದ ಸ್ಥಾಪನೆ ಆಗಬೇಕು ಎಂದು ಸೃಷ್ಟಿಕರ್ತ ಬಯಸುತ್ತಾನೆ. ಇಸ್ಲಾಂ ಎಂದರೆ ಸೃಷ್ಟಿಕರ್ತ, ಈಶ್ವರನ ಎದುರು ಸಂಪೂರ್ಣ ಸಮರ್ಪಣ ಎಂದರ್ಥ. ಇಸ್ಲಾಂ ಹೇಳುವುದಲ್ಲ, ಅನುಸರಿಸುವುದಾಗಿದೆ ಎಂದು ಹೇಳಿದರು.