ಜಿಲ್ಲೆ

ಎಲ್ಲರದಾಗಲಿ ವ್ಯಸನಮುಕ್ತ ಸಮಾಜ ನಿರ್ಮಾಣ ಗುರಿ

ಶಹಾಪುರ: ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿ ಎಲ್ಲರದಾಗಲಿ ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ದಿವ್ಯಾರಾಣಿ ನಾಯಕ ಸುರಪುರ ಹೇಳಿದರು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಕೀಲರ ಸಂಘದ ಸಹಯೋಗದಡಿ ಏರ್ಪಡಿಸಿದ್ದ ನಶಾಮುಕ್ತ ಭಾರತ ಮಾದಕ ವಸ್ತುಗಳ ವಿರೋಧಿ ದಿನ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವ ಸಂಕುಲಕ್ಕೆ ಅಪಾಯ ತರುವ ನಶೆಯ ವಸ್ತುಗಳನ್ನು ಯುವಕರು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತಮ ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ಏನೆಲ್ಲ ಸಾಧಿಸಲು ಸಾಧ್ಯ ಎಂಬುದನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಹೆಚ್ಚಾಗಿ ಯುವಕರು ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ಇರಿಸಬೇಕು. ಮುಗ್ಧ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದಕ್ಕೆ ಬ್ರೇಕ್ ಹಾಕಬೇಕು. ಮದ್ಯ ಸೇವಿಸಿ ವಾಹನ ಚಲಾಯಿಸಬಾರದು ಎಂದರು.

ಕೆಲ ಮಹಿಳಾ ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಗುಟ್ಖಾ ಜಿಗಿಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದರಿಂದ ಕ್ಯಾನ್ಸರ್‌ಗೆ ತುತ್ತಾಗುತ್ತೇವೆ ಎಂಬುದನ್ನು ಅಲ್ಲರೂ ಅರಿಯಬೇಕಿದೆ. ಯುವಕರು ಮೊದಲು ಖುಷಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ನಂತರ ವ್ಯಸನಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಜೈಲಾಲ್ ತೋಟದಮನೆ, ಪಿಎಸ್‌ಐ ಶ್ಯಾಮಸುಂದರ ನಾಯಕ, ಮುಖ್ಯಗುರು ಟಿ.ಪಿ. ಧೋತ್ರೆ, ಪ್ಯಾನಲ್ ವಕೀಲರಾದ ಮಲ್ಲಪ್ಪ ಕುರಿ, ಸಿದ್ದಪ್ಪ ಪಸ್ಪೂಲ್ ಇತರರಿದ್ದರು.