ಹಾಸನ: ನೀವು ಜೀವನದಲ್ಲಿ ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ನಿಮ್ಮ ತಂದೆ ತಾಯಿಯೇ ಕಾರಣ ಹೊರತು ಎಲ್ಲವೂ ನನ್ನಿಂದಲೇ ಸಾಧ್ಯವಾಯಿತು ಅಂತ ಅಂದುಕೊಳ್ಳಬಾರದು ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ವಿಶ್ವ ಪೌಂಡೇಶನ್ ಮತ್ತು ಆಸ್ಟ್ರೇಲಿಯನ್ ವಿಸಾ ಮೈಗ್ರೇಷನ್ ಕನ್ಸಲ್ಟೆನ್ಸಿ ಸರ್ವೀಸ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅತ್ಯುತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ವಿದೇಶಕ್ಕೆ ಪ್ರಯಾಣ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾನು ಪೊಲೀಸ್ ಇಲಾಖೆಗೆ ಬಂದಾಗ ಹಾಸನದಲ್ಲಿ ಮೊದಲು ಕೆಲಸ ಮಾಡಿದ್ದು. ಆಗ ನನಗೆ ಅಷ್ಟೊಂದು ಕನ್ನಡ ಬರುತ್ತಿರಲಿಲ್ಲ. ಯಾರಾದರೂ ನನ್ನ ಬಳಿ ಬಂದರೇ ಅವರಿಗೆ ನೋಡ್ತೀನಿ, ಮಾಡ್ತೀನಿ, ಕೇಳ್ತೀನಿ ಎಂದು ಉತ್ತರಿಸುತ್ತಿದ್ದೆ. ಮೂರು ಕನ್ನಡ ಪದಗಳನ್ನು ಮಾತ್ರ ಉಪಯೋಗಿಸಿ ಕರ್ತವ್ಯ ನಿರ್ವಹಿಸಿದ್ದೇನೆ. ಹಾಸನದಲ್ಲಿ ನಾನು ಕೆಲಸ ಮಾಡದಿದ್ದರೆ ಕನ್ನಡ ಕಲಿಯುತ್ತಿರಲಿಲ್ಲ ಎಂದು ನೆನಪಿಸಿಕೊಂಡರು.
ವಿದ್ಯಾರ್ಥಿಗಳು ಜೀವನದಲ್ಲಿ ಯಾರು ಸವಾಲನ್ನು ಸ್ವೀಕರಿಸುತ್ತಾರೆ ಅಂತಹವರು ಯಶಸ್ವಿಯಾಗುತ್ತಾರೆ. ಯಾವ ಕೆಲಸ ಮಾಡುತ್ತೀರಿ ಆ ಕೆಲಸದಲ್ಲಿ ಹೆಚ್ಚು ಗಮನ ಕೊಟ್ಟು ಉತ್ತಮ ಸೇವೆ ನೀಡಿದರೆ ಅದರಲ್ಲಿ ಪೂರ್ಣ ಯಶಸ್ಸು ಕಾಣಲು ಸಾಧ್ಯ. ಜೀವನದಲ್ಲಿ ನೀವು ಎಷ್ಟು ಸಾಧನೆ ಮಾಡುತ್ತೀರಿ ಅದು ಹೇಗೆ ಬಂತು ಎಂಬುದನ್ನು ಅರಿತು ನೀವು ನಿಮ್ಮ ತಂದೆ-ತಾಯಿಗೆ ಗೌರವಿಸಬೇಕು. ಆ ಸಾಧನೆಯಲ್ಲಿ ನಿಮ್ಮ ಪೋಷಕರ ಪರಿಶ್ರಮವು ಸೇರಿದೆ ಎಂಬುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಪೌಂಢೇಶನ್ ಮುಖ್ಯಸ್ಥ ಹರ್ಷ, ಆಕಾಶವಾಣಿಯ ವಿಜಯ ಅಂಗಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ದಾಕ್ಷಾಯಿಣಿ, ಎಂಸಿಇ ಕಾಲೇಜು ಪ್ಲೇಸ್ಮೆಂಟ್ ಅಧಿಕಾರಿ ಗೀತಾ ಕಿರಣ್, ಸ್ಕೌಟ್ಸ್ ಆಂಡ್ ಗೈಡ್ಸ್ ಹಿರಿಯರಾದ ಕಾಂಚನಾ ಮಾಲಾ, ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ಲಯನ್ಸ್ ಕ್ಲಬ್ ಹಗರೆಯ ಮಂಜೇಗೌಡ, ಅಮ್ಮಾ ಐ ಕೇರ್ ಸಂದೀಪ್, ದರ್ಶನ್ ಇತರರು ಉಪಸ್ಥಿತರಿದ್ದರು.