ಬೀದರ್: ಮಂದಿರ ಕಟ್ಟುವ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬ ರಾಮಭಕ್ತರ ಯೋಗದಾನವಿರಬೇಕು ಎಂದು ನಿಧಿ ಸಮರ್ಪಣಾ ಅಭಿಯಾನ ಬೀದರ್ ತಾಲೂಕು ಪ್ರಮುಖರಾದ ಯುವ ಮುಖಂಡ ಗುರುನಾಥ ರಾಜಗೀರಾ ಹೇಳಿದರು.
ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಿಧಿ ಸಮರ್ಪಣೆ ಅಭಿಯಾನದಲ್ಲಿ ಮಾತನಾಡಿ, ಶ್ರೀರಾಮ ಮತ್ತು ಹಿಂದೂ ಒಂದು ನಾಣ್ಯದ ಎರಡು ಮುಖಗಳು. ದೇಶದಲ್ಲಿ ರಾಜಕೀಯ ಪಕ್ಷಗಳು ಮತಬ್ಯಾಂಕ್ ಹಾಗೂ ಸೀಮಿತ ಜಾತಿ, ಜನಾಂಗದವರ ತುಷ್ಠೀಕರಣಕ್ಕೆ ಈ ಎರಡನ್ನೂ ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಹಿಂದೂಗಳ ಭಾವನೆ ಧಿಕ್ಕರಿಸುತ್ತ ಸ್ವಾರ್ಥ ರಾಜಕಾರಣ ನಡೆಸಿದ್ದಾರೆ. ಆದರೆ ಈಗ ಸಮಯ ಬದಲಾಗಿದೆ. ಶ್ರೀರಾಮ ಮತ್ತು ಹಿಂದೂಗೆ ಅವಹೇಳನ ಮಾಡಿದ ಪಕ್ಷಗಳ ಸ್ಥಿತಿ ಇಂದು ದಯನೀಯವಾಗಿದೆ ಎಂದರು.
ತಾಲೂಕಿನಲ್ಲೆಡೆ ಪ್ರತಿ ಹಳ್ಳಿಗಳಿಗೆ ನಿಧಿಗೆ ಸಂಬಂಧಿಸಿದಂತೆ ಕೂಪನ್ ಪುಸ್ತಕಗಳನ್ನು ತಲುಪಿಸಿದ್ದು, ನಿಯೋಜಿತ ಕಾರ್ಯಕರ್ತರು ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಭೇಟಿ ನೀಡಲಿದ್ದಾರೆ. ಎಲ್ಲರೂ ನಿಧಿ ಸಮರ್ಪಿಸಿ ಸಹಕರಿಸಲು ಕೋರಿದರು.
ಶಿವಕುಮಾರ ಸ್ವಾಮಿ, ವೀರೇಶ ಶೀಲವಂತ, ಅನೀಲ ಪನ್ನಾಳೆ, ಗೋಪಾಲ ರೆಡ್ಡಿ, ಚಂದ್ರಕಾಂತ ಬಂಡೆ ಇತರರಿದ್ದರು. ತಾಲೂಕಿನ ಜನವಾಡ, ಮಾಳೆಗಾಂವ, ಮನ್ನಳ್ಳಿ, ಕಮಠಾಣ, ಆಣದೂರ ಹೋಬಳಿಗಳಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿ ನಿಧಿ ಸಮರ್ಪಣಾ ಅಭಿಯಾನ ಕುರಿತು ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಹನುಮಂತರಾವ ಪಾಟೀಲ್ ಮಾರ್ಗದರ್ಶನ ಮಾಡಿದರು.