ಜಿಲ್ಲೆ

ಎಲ್ಲರ ಮನೆ ಬೆಳಗಿದ ಗೃಹಜ್ಯೋತಿ

ಬಾಗಲಕೋಟೆ: ಬಡವರು, ನಿರ್ಗತಿಕರಿಗೆ ವಿದ್ಯುತ್ ಬಿಲ್ ತುಂಬದೇ ಸಾಮಾಜಿಕವಾಗಿ ಮಾನಸಿಕ ವೇದನೆ, ಆತಂಕ ಪಡುತ್ತಿರುವದನ್ನು ಕಂಡು ಗೃಹಜ್ಯೋತಿ ಯೋಜನೆಯ ಮೂಲಕ ಎಲ್ಲರ ಮನೆ ಬೆಳೆಗಿಸುವ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ತೋವಿವಿಯ ಆಡಿಟೋರಿಯಂ ಹಾಲ್‍ನಲ್ಲಿ ಇಂಧನ ಇಲಾಖೆ ವತಿಯಿಂದ ಹಮ್ಮಿಕೊಂಡ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲಿನಿಂದ ಬೆಳೆಕಿನ ಕಡೆ ಎಂಬಂತೆ ಬೆಳೆಕಿನ ಮಹತ್ವ ಅನುಭವಿಸಿದವರಿಗೆ ಮಾತ್ರ ಗೊತ್ತು. ನಾನು ಚಿಕ್ಕವನಿದ್ದಾಗ ಗ್ರಾಮದ ಅಗಸಿ ಮುಂದಿನ ಚಿಮಣಿ ಬೆಳಕಿನಲ್ಲಿ ಓದುತ್ತಿದ್ದೇವು. ನಂತರ ನಮ್ಮೂರಿಗೆ ವಿದ್ಯುತ್ ಬಂದಾಗ ಸಂಭ್ರಮ ಮನೆಮಾಡಿತ್ತು. ಇಂದು ಮನೆಗಳಿಗೆ ಬೆಳಕನ್ನು ಕೊಡುವ ಕಾರ್ಯಕ್ರಮ ಇದಾಗಿದೆ.

ಈ ಮೊದಲು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಯೋಜನೆಯಡಿಯಲ್ಲಿ ವಿದ್ಯುತ್ ಪಡೆದುಕೊಂಡವರು ನಂತರದ ದಿನಗಳಲ್ಲಿ ವಿದ್ಯುತ್ ಬಿಲ್ ಬಂದಾಗ ಆ ಬಿಲ್ಲನ್ನು ಕಟ್ಟಲು ಆಗದೇ ಇದ್ದಾಗ ಆತಂಕಕ್ಕೊಳಗಾಗಿದ್ದ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡ ಮೇಲು, ಕೀಳು ಬಡವ ಬಲ್ಲಿದರನ್ನದೇ ಗರಿಷ್ಟ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ಸಾಮಾಜಿಕವಾಗಿ, ನ್ಯಾಯಯುತವಾಗಿ ಹಾಗೂ ಸ್ವಾಭಿಮಾನದಿಂದ ಬದುಕಲು ಈ ಯೋಜನೆ ಅನುವು ಮಾಡಿಕೊಟ್ಟಿದೆ ಎಂದರು.

ಈ ಯೋಜನೆಯಡಿಯಲ್ಲಿ ಶೇ.83 ರಷ್ಟು ನೊಂದಣಿ ಮಾಡಿಕೊಂಡಿದ್ದಾರೆ. ಅಂದರೆ ಒಟ್ಟು 4,28,268 ಗೃಹ ಬಳಕೆಯ ಸಂಪರ್ಕ ಹೊಂದಿದ್ದು, ಅದರಲ್ಲಿ 35,7119 ಗ್ರಾಹಕರು ಈ ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 307866 ಗ್ರಾಹಕರು 200 ಯೂನಿಟ್‍ಗಳ ಮಿತಿಯೊಳಗೆ ವಿದ್ಯುತ್ ಬಳಸುತ್ತಿದ್ದಾರೆ. ಈ ಯೋಜನೆಯ ಫಲಾನುಭವಿಗಳು ಮಾಸಿಕ 10.55 ಕೋಟಿ ರೂ. ಆರ್ಥಿಕ ಪ್ರಯೋಜ ಪಡೆಯುತ್ತಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಸ್ಕಾಂ ಪ್ರಭಾರಿ ಅಧೀಕ್ಷಕ ಅಭಿಯಂತರ ಖಲೀಂ ಅಹಮ್ಮದ ಜಿಲ್ಲೆಯಲ್ಲಿ ಒಟ್ಟು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸ್ಥಾವರಗಳು 71012 ಇದ್ದು, ಸಂಪೂರ್ಣ ಗ್ರಾಹಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಭಾಗ್ಯಜ್ಯೋತಿ, ಕುಟೀರಜ್ಯೋತಿ ಗ್ರಾಹಕರಿಗೆ ಪ್ರತಿ ತಿಂಗಳು 40 ಯುನಿಟ್‍ಗಳವರೆಗೆ ಸರಕಾರದಿಂದ ಉಚಿತ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ ಈ ಯೋಜನೆಯಡಿಯಲ್ಲಿ ಇದರ ಜೊತೆಗೆ ಶೇ.10 ರಷ್ಟು ಹೆಚ್ಚಿಗೆ ಸೇರಿಸಿ ಒಟ್ಟು 58 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ ಎಂದರು. ಅಮೃತ ಜ್ಯೋತಿ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 83 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದ ಅರ್ಹ ಫಲಾನುಭವಿಗಳಾದ ಬಾದಾಮಿಯ ನೀಲವ್ವ ಮಲ್ಲಾರ, ಅಬ್ದುಲ್ ರಜಾಕ, ಗುಳೇದಗುಡ್ಡದ ಎಸ್.ಜಿ.ಶೆಟ್ಟರ, ಎಂ.ಎನ್.ಮುರುಗಾಮಠ, ಪ್ರೇಮಾ ಬಾಗಿನವರ, ಲಕ್ಷ್ಮಣ ಹಡಗಲಿ ಬೇವೂರ ಸೇರಿದಂತೆ ಹಲವರಿಗೆ ಶೂನ್ಯ ಬೆಲೆಯ ವಿದ್ಯುತ್ ಬಿಲ್‍ಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ವಾಯ್.ಮೇಟಿ, ವಿಜಯಾನಂದ ಕಾಶಪ್ಪನವರ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಕೆಪಿಟಿಸಿಎಲ್ ಮುಖ್ಯ ಇಂಜಿನೀಯರ್ ಕಾಶಿನಾಥ ಹಿರೇಮಠ, ಅಧೀಕ್ಷಕ ಅಭಿಯಂತರ ಬಿ.ಎಸ್.ಹೆಬ್ಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.