ಜಿಲ್ಲೆ

ಎಲ್ಲರ ಚಿತ್ತ ಚಿಮುಲ್ ಚುನಾವಣೆಯತ್ತ

ರಾಜಕೀಯ ನಾಯಕರ ಕೆಸರೆರಚಾಟ ಲಾಭ ಲೆಕ್ಕಾಚಾರದ ಮೇಲಾಟ

 ಚಿಕ್ಕಬಳ್ಳಾಪುರ : ಪ್ರತ್ಯೇಕ ಹಾಲು ಒಕ್ಕೂಟ ರಚನೆ ವಿಚಾರದಲ್ಲಿ ರಾಜಕೀಯ ನಾಯಕರ ಕೆಸರೆರಚಾಟ ಚುನಾವಣೆ ನಿರೀಕ್ಷೆಯಲ್ಲಿ ಜೋರಾಗಿದೆ.

ಸಹಕಾರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೋಲಾರ ಹಾಲು ಒಕ್ಕೂಟವನ್ನು ವಿಭಜಿಸಿ ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚಿಸಬೇಕೆಂಬುದು ಸಾಕಾರಗೊಂಡಿದೆ. ವಾದ ವಿವಾದಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ವಿವಾದವನ್ನು ಬಗೆಹರಿಸಿಕೊಂಡು ಬಂದಿದ್ದು ಈಗ ಒಕ್ಕೂಟದ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಮೇಲಾಟಗಳು ನಡೆಯುತ್ತಿವೆ. ವಿರೋಧ ಮತ್ತು ಸಮರ್ಥನೆಯ ಗಲಾಟೆಯಲ್ಲಿ ನಾಯಕರು ಬಲವೃದ್ಧಿಯ ಲಾಭವನ್ನು ಪಡೆಯಲು ಮುಂದಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯತ್ತ ಚಿತ್ತ

ಹೊಸದಾಗಿ ರಚನೆಯಾಗಿರುವ ಚಿಮುಲ್ ನಿರ್ದೇಶಕರ ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಬೇಕಾಗಿದೆ. ಇದಕ್ಕೆ ಮೊದಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿ, ವಿಭಜನೆ, ದಾಖಲೆಗಳ ನಿರ್ವಹಣೆಯ ಪ್ರಕ್ರಿಯೆಯನ್ನು ಮುಗಿಸಬೇಕಾಗಿದೆ. ಪ್ರಸ್ತುತ ಕೋಲಾರ ಒಕ್ಕೂಟದಲ್ಲಿ ಆಡಳಿತಾಧಿಕಾರಿ ಜವಾಬ್ದಾರಿ ಹೊಂದಿದ್ದಾರೆ. ಇಲ್ಲಿಗೂ ಉಸ್ತುವಾರಿ ಅಧಿಕಾರಿ ತ್ವರಿತವಾಗಿ ಬರಲಿದ್ದು ಹೊಸ ಒಕ್ಕೂಟದ ಕೆಲಸಗಳನ್ನು ನಿಭಾಯಿಸಲಿದ್ದಾರೆ. ಈಗ ಹೈನೋದ್ಯಮ ಕ್ಷೇತ್ರದ ಎಲ್ಲರ ಚಿತ್ತ ಚುನಾವಣೆಯತ್ತ ಇದೆ.

ವಿವಾದಗಳಲ್ಲಿ ಒಕ್ಕೂಟದ ಕೆಲಸ

ಚಿಮುಲ್ ವಿಭಜನೆಯ ಪ್ರತಿಯೊಂದು ವಿಚಾರದಲ್ಲೂ ವಿವಾದಗಳಿಂದ ನಾನಾ ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿದೆ.

ಪ್ರಾರಂಭದಲ್ಲಿ ಒಕ್ಕೂಟ ವಿಭಜನೆ ಆದೇಶ, ನಿರ್ದೇಶಕರ ಅಧಿಕಾರದ ಅವಧಿ ಮೊಟಕು ವಿಚಾರವಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆಡಳಿತಾಧಿಕಾರಿ ನೇಮಕ, ಹಲವು ನಿರ್ಣಯಗಳ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಕಾಂಗ್ರೆಸ್ ಸರ್ಕಾರದಿಂದ ಒಕ್ಕೂಟದ ವಿಭಜನೆ ಆದೇಶ, ನಿರ್ದೇಶಕರ ಅಧಿಕಾರದ ಅವಧಿ ವಿಸ್ತರಣೆ, ಚುನಾವಣೆ ವಿಳಂಬ ವಿಚಾರದಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಬೆಂಬಲಿತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿ ಒಕ್ಕೂಟದ ಕೆಲಸಗಳಲ್ಲಿ ಪ್ರಗತಿ ಕುಂಠಿತಗೊಂಡಿದೆ.

ಚಿಮುಲ್ ರಚನೆ ಆದೇಶದ ಸಂದರ್ಭದಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಯಿತು. ಈಗ ವಿಭಜನೆಯ ಹಳೇ ಪ್ರಕ್ರಿಯೆಯೇ ಮುಂದುವರಿಯುತ್ತಿದೆ. ಸಂಸದ ಡಾ. ಕೆ. ಸುಧಾಕರ್ ನ್ಯಾಯಯುತ ತೀರ್ಮಾನ, ನಡೆ ಮತ್ತು ಈ ಭಾಗದ ರೈತರ ಹೋರಾಟವೇ ಪ್ರಮುಖ ಕಾರಣ. - ಕೆ.ವಿ.ನಾಗರಾಜ್, ಕೋಚಿಮುಲ್ ಮಾಜಿ ನಿರ್ದೇಶಕ, ಚಿಕ್ಕಬಳ್ಳಾಪುರ