ಮದ್ದೂರು: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಏ.14ರಂದು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯದವರನ್ನು ಗುರುತಿಸಿ ಸನ್ಮಾನಕ್ಕೆ ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಜನಪರ ಹೋರಾಟಗಾರ ಹಾಗೂ ಪುರಸಭೆ ಮಾಜಿ ಸದಸ್ಯ ಮ.ನ.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಆಯೋಜಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಂದು ಕೇವಲ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಎಲ್ಲ ಸಮುದಾಯದವರನ್ನು ಗುರುತಿಸಿ ಅಭಿನಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿನಿಂದಲೂ ವಿವಿಧ ಸಾಧಕರಿಗೆ ಮತ್ತು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಕ್ಕೆ ಆಯ್ಕೆ ಮಾಡುವುದು ಪ್ರತೀತಿಯಾಗಿದ್ದು, ಇದಕ್ಕೆ ಎಳ್ಳುನೀರು ಬಿಟ್ಟಿರುವ ಸಮಾಜ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ಕೇವಲ ಒಂದು ವರ್ಗಕ್ಕಷ್ಟೇ ಮೀಸಲು ನಿಗದಿಗೊಳಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಒಂದೇ ಸಮುದಾಯಕ್ಕಷ್ಟೇ ಸೀಮಿತಗೊಳಿಸಿದರೆ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಯಾಗಲಿದೆ. ಮುಂದಿನ ದಿನಗಳಲ್ಲಿ ಮಹನೀಯರು ಆಯಾ ಸಮುದಾಯದವರಿಗೆ ಸೀಮಿತರಾದರೆ ಅಚ್ಚರಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಡೆಯುವ ಜಯಂತಿ ಕಾರ್ಯಕ್ರಮದ ವೇಳೆ ಆಯಾ ಸಮುದಾಯದವರನ್ನೇ ಅಭಿನಂದನೆಗೆ ಪರಿಗಣಿಸುವಂತೆ ಹಕ್ಕೊತ್ತಾಯಗಳು ಕೇಳಿಬರಲಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಲ್ಲ ಸಮುದಾಯದವರನ್ನು ಪರಿಗಣಿಸಲು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.